ರಾಯಚೂರು : ಕೊರೊನಾ ಸೋಂಕಿನ ಭೀತಿಯಿಂದ ದೇಶದಲ್ಲಿ ಲಾಕ್ಡೌನ್ ಮಾಡಲಾಗಿದೆ. ಇದರ ಪರಿಣಾಮ ಶ್ರಮಿಕ ವರ್ಗಕ್ಕೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ. ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನ ಸಾಗಿಸುವುದು ಕಷ್ಟದಾಯಕವಾಗಿದೆ.
ಲಾಕ್ಡೌನ್ ಪರಿಣಾಮ ಯಾವುದೇ ಕೆಲಸ ಸಿಗದೇ ಕೂಲಿ ಕಾರ್ಮಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ಕಾರ್ಮಿಕರ ಪರಿಸ್ಥಿತಿ ಶೋಚನಿಯವಾಗಿದೆ.
ಜಿಲ್ಲೆಯ ಏಳು ತಾಲೂಕಿನಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದಾರೆ. ಅದರಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ 27,505 ಕಟ್ಟಡ ಕಾರ್ಮಿಕರು ನೋಂದಣಿಯಾಗಿದ್ದಾರೆ. ಇದನ್ನ ಹೊರತು ಪಡಿಸಿ ಅಸಂಘಟಿತ ವಲಯದಲ್ಲಿ ಸಹ ಕಾರ್ಮಿಕರು ದುಡಿಮೆ ಮಾಡುತ್ತಿದ್ದಾರೆ. ಅವರಲ್ಲಿ 2,625 ಅಸಂಘಟಿತ ಕಾರ್ಮಿಕರನ್ನ ಕಾರ್ಮಿಕ ಇಲಾಖೆ ಗುರುತಿಸಿದೆ.
ಲಾಕ್ಡೌನ್ ಹಿನ್ನೆಲೆ ಕಟ್ಟಡ ಕಾರ್ಮಿಕರ ನೆರವಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಸಾವಿರ ರೂಪಾಯಿಯಂತೆ ಎರಡು ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದೆ. ಆದರೆ, ಇದುವರೆಗೆ ಹಣ ಮಾತ್ರ ನೀಡಿಲ್ಲ. ಇದರಿಂದ ಸರ್ಕಾರ ಘೋಷಣೆ ಮಾಡಿದ ಹಣವಿಲ್ಲದೆ, ಇತ್ತ ಕೂಲಿ ಕೆಲಸವಿಲ್ಲದೆ ಕಟ್ಟಡ ಕಾರ್ಮಿಕರ ಬದುಕು ಶೋಚನೀಯವಾಗಿದೆ,
ಆಹಾರ ನಾಗರಿಕ ಸರಬರಾಜು ಇಲಾಖೆ:
ಲಾಕ್ ಡೌನ್ ಹಿನ್ನಲೆಯಿಂದಾಗಿ ಸರ್ಕಾರ ಎರಡು ತಿಂಗಳ ಪಡಿತರ ವಿತರಣೆಗೆ ಆದೇಶ ಮಾಡಿದೆ. ಈ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಂತ್ಯೋದಯ(ಎಎವೈ)-53035 ಕಾರ್ಡ್ದಾರರು ಇದ್ದಾರೆ. ಅಂತ್ಯೋದಯ ಕಾರ್ಡ್ ಒಂದಕ್ಕೆ 35 ಕೆ.ಜಿ. ಅಕ್ಕಿ, ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 5 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ ವಿತರಣೆ ಮಾಡಲಾಗುತ್ತಿದೆ. ಅಂತೋದ್ಯಯ ಕಾರ್ಡ್ದಾರರಿಗಾಗಿ 37,124.50 ಕ್ವಿಂಟಲ್ ಅಕ್ಕಿ, ಬಿಪಿಎಲ್ ಕಾರ್ಡ್ ದಾರರಿಗೆ 13,0594.20 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.