ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಲಾಕ್ಡೌನ್ ಆದೇಶಗಳು ಕಾಟಾಚಾರಕ್ಕೆ ಅನುಸರಿಸಲಾಗುತ್ತಿದೆ. ಹಗಲಿನಲ್ಲಿ ಸ್ತಬ್ಧವಾಗಿ ಕಾಣುವ ನಗರ ರಾತ್ರಿಯಾಗುತ್ತಲೇ ತೆರೆದುಕೊಳ್ಳುತ್ತದೆ. ಯಾರ ಮುಲಾಜಿಲ್ಲದೆ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದು, ಆದೇಶ ಪಾಲನೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾದಂತೆ ಕಾಣುತ್ತಿದೆ.
ಭಾರತ ಲಾಕ್ ಡೌನ್ ಮಧ್ಯೆ ರಾತ್ರಿಯ ವೇಳೆ ನಡೆಯುತ್ತಿರುವ ತರಕಾರಿ, ಅಕ್ರಮ ಮದ್ಯ, ಕಳ್ಳಭಟ್ಟಿ ಸಾರಾಯಿ ದಂಧೆ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಪಲವಾಗಿದೆ. ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ರೈತರ ಹೆಸರಿನಲ್ಲಿ ಟಿಫಿನ್, ಟೀ ಕೇಂದ್ರಗಳು, ಕಳ್ಳಭಟ್ಟಿ, ಅಕ್ರಮ ಮಧ್ಯಮಾರಾಟ ಕ್ರಿಯೆ ಅಡೆ ತಡೆಗಳಿಲ್ಲದೆ ಮೊಬೈಲ್ ಬೆಳಕಲ್ಲಿ ನಡೆಯುತ್ತಿವೆ.
ಇನ್ನೂ ಜೂನಿಯರ್ ಕಾಲೇಜು ಆವರಣ ಸಂಜೆ ಆಗುತ್ತಿದ್ದಂತೆ ಅವ್ಯವಹಾರಗಳ ಅಡ್ಡೆಯಾಗುತ್ತಿದೆ. ರಾತ್ರಿ 10 ರಿಂದ 1 ಗಂಟೆಯವರೆಗೆ ಸಹಸ್ರಾರು ಜನ, ನೂರಾರು ವಾಹನಗಳು ಕಾಣಸಿಗುತ್ತವೆ. ಸ್ಥಳೀಯರು ಸೇರಿದಂತೆ ಮಸ್ಕಿ, ಹುನಗುಂದ, ಹುಣಸಗಿ, ಸುರಪುರ, ದೇವದುರ್ಗ, ಮಾನ್ವಿ, ಸಿರವಾರ, ಕುಷ್ಟಗಿ, ಸಿಂಧನೂರು ಹಾಗೂ ಸುತ್ತಮುತ್ತಲ ತಾಲೂಕುಗಳ ಸಹಸ್ರಾರು ರೈತರು ಜಮಾವಣೆ ಆಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಇತರೆ ನಿಯಮಗಳ ಪಾಲನೆಯ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ.
ಅಹೋರಾತ್ರಿ ರೈತರ ಹೆಸರಲ್ಲಿ ನಡೆವ ಈ ಅವ್ಯವಸ್ಥೆ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ಜಿಲ್ಲೆಯು ಕೊರೊನಾ ಹಾಟ್ಸ್ಪಾಟ್ ಆಗಲಿದೆ.