ರಾಯಚೂರು: ಕಳೆದೊಂದು ವಾರದಿಂದ ಕಾಣಿಸಿಕೊಂಡಿರುವ ವಿಚಿತ್ರ ಕಾಯಿಲೆಗೆ ಜಾನುವಾರುಗಳು ಮೃತಪಟ್ಟಿರುವ ಘಟನೆ ರಾಯಚೂರಿನ ತುಂಗಭದ್ರಾ ಗ್ರಾಮದಲ್ಲಿ ನಡೆದಿದೆ.
ಎತ್ತು ಮತ್ತು ಎಮ್ಮೆಗಳು ವಿಲವಿಲನೆ ಒದ್ದಾಡಿಕೊಂಡು ಮೂಕವೇದನೆಯಿಂದ ನರಳಿ ಸಾವನ್ನಪ್ಪುತ್ತಿವೆ. ಒಂದು ವಾರದಿಂದ ಈಚೆಗೆ ಹೇಮರೆಡ್ಡಿ, ಲಕ್ಷ್ಮಪ್ಪ ಎಂಬುವರಿಗೆ ಸೇರಿದ ತಲಾ 2 ಜಾನುವಾರುಗಳು, ಗುಂಡಪ್ಪ, ನಾರಾಯಣ, ಹನುಮಂತಪ್ಪ ಎಂಬುವವರ ತಲಾ 1 ಜಾನುವಾರು ಮೃತಪಟ್ಟಿದ್ದು, ಒಟ್ಟು 7 ಎಮ್ಮೆ, 2 ಆಕಳು ಸೇರಿದಂತೆ 9 ಜಾನುವಾರುಗಳು ಈಗಾಗಲೇ ಅಸುನೀಗಿವೆ.
ಜಾನುವಾರುಗಳು ಸಾವನ್ನಪ್ಪುತ್ತಿರುವ ಸುದ್ದಿ ತಿಳಿದು ಗ್ರಾಮಕ್ಕೆ ಪಶು ವೈದ್ಯರು ಭೇಟಿ ನೀಡಿ, ಇತರೆ ಪಶುಗಳಿಗೆ ಚಿಕಿತ್ಸೆ ನೀಡಿ ಲಸಿಕೆ ಹಾಕಿದ್ಲಾದಾರೆ. ಯಾವ ಕಾಯಿಲೆಯಿಂದ ಬಳಲುತ್ತಿವೆ ಎನ್ನುವ ಕುರಿತು ಮಾಹಿತಿ ಕೇಳಲು ಗ್ರಾಮಸ್ಥರು ಇಲಾಖೆ ಕಚೇರಿಗೆ ತೆರಳಿದಾಗ ಜಿಲ್ಲಾ ಉಪನಿರ್ದೇಶಕರು, ಹಿರಿಯ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ನಲ್ಲಿದ್ದು, ಸಂಜೆ ವೇಳೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡು ಜನರಿಗೆ ತಿಳಿಸುತ್ತೇವೆ ಎಂದಿದ್ದಾರೆ.
ಸದ್ಯ ಈ ಘಟನೆ ತುಂಗಭದ್ರಾ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಇತರೆ ಪಶುಗಳಿಗೆ ಈ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.