ರಾಯಚೂರು : ಕಳೆದ ಮಾರ್ಚ್ 3ರಂದು ಗುಜರಾತ್ ಮೂಲದ ಲಾರಿಗಳಲ್ಲಿ ಅಡಿಕೆ ಸಾಗಿಸುತ್ತಿದ್ದಾಗ ಬೆಳಗಾವಿಯ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಅಧಿಕಾರಿಗಳು ಅಕ್ರಮ ಸಾಗಣೆ ಆರೋಪದಡಿ ಲಾರಿಗಳನ್ನು ಜಪ್ತಿ ಮಾಡಲಾಗಿತ್ತು. ಬಳಿಕ ಲಿಂಗಸೂಗೂರು ಪೊಲೀಸ್ ಠಾಣೆಯ ಸುಪರ್ದಿಗೆ ವಹಿಸಲಾಗಿದ್ದು, ಇದೀಗ ಲಾರಿಗಳು ಪೊಲೀಸ್ ಠಾಣೆ ಆವರಣದಲ್ಲಿಯೇ ನಿಂತಿವೆ.
ಈ ಮೂರು ಲಾರಿಗಳಲ್ಲಿ ಸುಮಾರು 90 ಟನ್ ಅಡಿಕೆ ಸಾಗಿಸಲಾಗುತ್ತಿದ್ದು, ಇದನ್ನು ಡಿಜಿಜಿಐ ವಶಕ್ಕೆ ಪಡೆದುಕೊಂಡು ನಂತರ ಲಿಂಗಸೂಗೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಿನಿಂದ ಇನ್ನೂ ಸಹ ಲಾರಿಗಳು ಲಿಂಗಸೂಗೂರು ಪೊಲೀಸ್ ಸ್ಟೇಷನ್ ಆವರಣದಲ್ಲಿ ನಿಂತುಕೊಂಡಿವೆ. ಅಲ್ಲಿನ ಪೊಲೀಸರಿಗೆ ಅಡಿಕೆ ಕಾಯುವ ಕೆಲಸವೊಂದು ದಿನನಿತ್ಯ ತಲೆನೋವು ಆಗಿ ಪರಿಣಮಿಸಿದೆ.
ಇದನ್ನೂ ಓದಿ : ಬೀದರ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣ ಬಯಲಿಗೆ; 118 ಕೆ.ಜಿ ಮಾಲು ವಶಕ್ಕೆ; ಇಬ್ಬರ ಬಂಧನ
ಇನ್ನು, ಈ ಪ್ರಕರಣ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಿಯಮದ ಪ್ರಕಾರ ಮಾರುಕಟ್ಟೆ ಹೊರಗಡೆ ಬರುವಾಗಲೇ ಅದಕ್ಕೆ ಜಿಎಸ್ಟಿ ಪಾವತಿಸಿರಬೇಕು. ಆದರೆ ಜಿಎಸ್ಟಿ ಪಾವತಿಸದೆ ಲಾರಿಗಳನ್ನು ಸಾಗಿಸುತ್ತಿರುವುದರಿಂದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಕಸ್ಟಮ್ ಆ್ಯಂಡ್ ಹಾಗೂ ರೆವಿನ್ಯು ಡಿಪಾರ್ಟ್ ಮೆಂಟ್ನ ಡೆಪ್ಯೂಟಿ ಕಮಿಷನರ್ ಹಾಗು ಇತರೆ ಅಧಿಕಾರಿಗಳು ಈ ಲಾರಿಗಳನ್ನು ಕಳೆದ ಮಾರ್ಚ್ 3ರಂದು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಭದ್ರತೆ ಹಾಗೂ ಪಾರ್ಕಿಂಗ್ ಕೇಳಿದ್ದಾರೆ. ಹಾಗಾಗಿ ಇದನ್ನು ನಮ್ಮ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಇರಸಲಾಗಿದೆ. ಉಳಿದಂತೆ ಬೆಳಗಾವಿ ಜಿಎಸ್ಟಿ ಅಧಿಕಾರಿಗಳಿಗೆ ಸಂಬಂಧಿಸಲ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಲಿಂಗಸೂಗೂರು ಪೊಲೀಸರಿಗೆ ತಮ್ಮ ನಿತ್ಯ ಕಾಯಕದ ಜೊತೆಯಲ್ಲಿ ಈಗ ಪೊಲೀಸ್ ಠಾಣೆ ಆವರಣದಲ್ಲಿರುವ ಅಡಿಕೆ ತುಂಬಿದ ಲಾರಿಗಳನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ.
ಆಕ್ರಮ ಮರಳು ಅಡ್ಡೆಗಳ ಮೇಲೆ ಅಥಣಿ ಪೊಲೀಸರ ದಾಳಿ : ಮತ್ತೊಂದೆಡೆ ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಅಡ್ಡೆಗಳ ಮೇಲೆ ಅಥಣಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 30ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಸಮೀಪದಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ರಾತ್ರಿ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೇ ನೇತೃತ್ವದಲ್ಲಿ ತಕ್ಷಣ ದಾಳಿ ನಡೆಸಿ 26 ಟ್ರ್ಯಾಕ್ಟರ್, 4 ಜೆಸಿಬಿ ಮತ್ತು ಒಂದು ಟಿಪ್ಪರ್ ವಾಹನ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : Sand mining: ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ಅಥಣಿ ಪೊಲೀಸರ ದಾಳಿ; 26 ಟ್ರ್ಯಾಕ್ಟರ್, 4 ಜೆಸಿಬಿ, ಟಿಪ್ಪರ್ ವಶಕ್ಕೆ