ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾ.ಪಂ. ವ್ಯಾಪ್ತಿಯ ಮಸೀದಾಪೂರ ಗ್ರಾಮದಲ್ಲಿ ಅತಿಯಾದ ಮಳೆಯಿಂದ ಭೂ ಕುಸಿತ ಉಂಟಾಗಿ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಹಾಗಾಗಿ ಸಂತ್ರಸ್ತರಿಗೆ ನೆರವು ನೀಡಿ ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥ ಚನ್ನಪ್ಪ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಾಪೂರ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಭೂ ಕುಸಿತ ಉಂಟಾಗುತ್ತಲೇ ಇದೆ. ಗ್ರಾಮದಲ್ಲಿ ಸಮಾರು 3 ಸಾವಿರ ಜನಸಂಖ್ಯೆ ಇದ್ದು ಭೂ ಕುಸಿತದಿಂದ ಭಯದಲ್ಲೇ ಕಾಲ ದೂಡುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಭೂ ಕುಸಿತ ಹೆಚ್ಚಾಗಿದೆ. ಇದರಿಂದ ಹಲವಡೆ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಕೆಲವರು ಭೂ ಕುಸಿತಕ್ಕೆ ಹೆದರಿ ಬಯಲು ಪ್ರದೇಶದತ್ತ ತೆರಳಿದ್ದಾರೆ. ಭೂ ಕುಸಿತವು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.