ರಾಯಚೂರು: ಕರ್ನಾಟಕ ತೆಲಂಗಾಣದ ಗಡಿ ಜಿಲ್ಲೆ ರಾಯಚೂರು ಜಿಲ್ಲೆಯ ಗಡಿ ಭಾಗದ ಚೆಕ್ ಪೋಸ್ಟ್‌ನಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ತಾಲೂಕಿನ ಶಕ್ತಿನಗರದ ಎರಡನೇ ಕ್ರಾಸ್ ಹತ್ತಿರ ಕೃಷ್ಣಾ ಸೇತುವೆ ಬಳಿ ಕಾರ್‌ನಲ್ಲಿ ಬುಧವಾರ 4 ಗಂಟೆಯ ಸುಮಾರಿಗೆ ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿ ಸಾಗಿಸುವಾಗ ಸಿಕ್ಕಿದೆ.
ತೆಲಂಗಾಣ ರಾಜ್ಯದಿಂದ ರಾಯಚೂರು ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರ್ ನಂಬರ್ ಪ್ಲೇಟ್ ಇಲ್ಲದೆ ಬರುತ್ತಿತ್ತು. ಈ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ಮಾಡಲು ವಾಹನ ತಡೆದಿದ್ದಾರೆ. ವಾಹನ ಪರಿಶೀಲನೆ ಮಾಡುವಾಗ ಕಾರ್ ಹಿಂದುಗಡೆಯ ಡಿಕ್ಕಿಯಲ್ಲಿ ಗರಿ ಗರಿ ನೋಟಿನ ಕಟ್ಟು ದೊರೆತಿವೆ. ಅದರಲ್ಲಿ ಮೂರು ಲಕ್ಷ ರೂಪಾಯಿ ಇತ್ತು ಎಂಬುದು ತಿಳಿದುಬಂದಿದೆ. ಹಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲೆಗಳನ್ನು ಕೇಳಿದ್ದಾರೆ. ಆದರೆ ಕಾರಿನ ಮಾಲೀಕರು ಯಾವುದೇ ಸೂಕ್ತವಾದ ದಾಖಲೆಗಳು ಒದಗಿಸಿಲ್ಲ. ಹೀಗಾಗಿ ಪೊಲೀಸರು ಹಣವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಸೂಕ್ತ ದಾಖಲೆ ನೀಡದ ಕಾರಣ ಹಣ ಜಪ್ತಿ: ಮಹಾರಾಷ್ಟ್ರ ರಾಜ್ಯದ ಜಾಲಗಾಂವ್ ಮೂಲದ ಪ್ರಕಾಶ್ ಸುಖಲಾಲ್ ಎನ್ನುವವರು ಕಾರಿನಲ್ಲಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು. ಯಾವ ಕಾರಣಕ್ಕೆ ಇಷ್ಟೊಂದು ಮೊತ್ತದ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ಪೊಲೀಸರು ವಿಚಾರಣೆ ನಡೆಸಿದಾಗ ಸೂಕ್ತವಾದ ದಾಖಲೆಗಳು ಹಾಗೂ ಸಮಂಜಸವಾದ ಉತ್ತರ ನೀಡದ ಕಾರಣ ಅನುಮಾನಗೊಂಡು ಶಕ್ತಿನಗರ ಪೊಲೀಸರು ಹಣ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆಕ್ಪೋಸ್ಟ್ನಲ್ಲಿ ಎಲ್ಲಾ ವಾಹನಗಳ ತಪಾಸಣೆ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್‌ಗಳು ತೆರೆಯಲಾಗಿದ್ದು, ಅನುಮಾನ ಬರುವ ಎಲ್ಲಾ ವಾಹನಗಳನ್ನು ತಪಾಸಣೆಯನ್ನು ಮಾಡಲಾಗುತ್ತಿದೆ. ಇನ್ನೂ ಅಧಿಕೃತ ಘೋಷಣೆ ಮುನ್ನವೇ ಗಡಿ ಭಾಗದಲ್ಲಿ ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿ ಹಣ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಬರುವಂತಹ ದಿನಗಳಲ್ಲಿ ಮತ್ತಷ್ಟು ತಪಾಸಣೆ ಬಿಗಿಗೊಳಿಸಬೇಕಾಗಬಹುದು.
ಲಕ್ಷಾಂತರ ಮೌಲ್ಯದ ಸೀರೆ ವಶ : ಇನ್ನೊಂದೆಡೆ ಚುನಾವಣಾ ಆಯೋಗದ ನಿರ್ದೇಶನದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ವಿಚಕ್ಷಣಾ ದಳ ಹೈಅಲರ್ಟ್ ಆಗಿದೆ. ಈಗಾಗಲೇ ದಾಖಲೆ ಇಲ್ಲದ ಕೋಟ್ಯಂತರ ಮೌಲ್ಯದ ಚಿನ್ನ, ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶಪಡಿಸಿಕೊಂಡು ತೀವ್ರ ತನಿಖೆ ನಡೆಸುತ್ತಿದೆ.
ಗೋಲ್ಡ್ ಬಿಸ್ಕೆಟ್ಗಳು ಪೊಲೀಸರ ವಶ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದೆಡೆ ಚಿನ್ನ ಸಿಕ್ಕರೆ ಮತ್ತೊಂದೆಡೆ ಸೀರೆಗಳನ್ನು ವಶಕ್ಕೆ ಪಡೆದಿರುವ ಚುನಾವಣಾ ವಿಚಕ್ಷಣಾ ದಳದ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 9 ಕೆಜಿಗೂ ಅಧಿಕ ಬಂಗಾರದ ಸರ ಹಾಗೂ ಗೋಲ್ಡ್ ಬಿಸ್ಕೆಟ್‍ಗಳನ್ನ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದ್ದು, ಚುನಾವಣೆ ನಿಮಿತ್ತ ಜಿಲ್ಲೆಯ ಎಲ್ಲಾ ಗಡಿ ಭಾಗದಲ್ಲೂ ಪೊಲೀಸ್ ಇಲಾಖೆ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿದೆ.
ಇದನ್ನೂ ಓದಿ : ಚುನಾವಣೆ ಹೊತ್ತಲ್ಲಿ ಜನರಿಗೆ ಆಮಿಷ.. ಕಾಫಿ ನಾಡಲ್ಲಿ 9 ಕೆಜಿಗೂ ಆಧಿಕ ಚಿನ್ನ, ಸೀರೆಗಳು ವಶಕ್ಕೆ