ರಾಯಚೂರು: ಕಾಲೇಜು ನಿರ್ಮಾಣಕ್ಕೆ ಸ್ಥಳೀಯ ಜನ ಪ್ರತಿನಿಧಿಗಳು ಕೋಟಿ ಕೋಟಿ ಅನುದಾನದ ಖರ್ಚು ಮಾಡಿದ್ದರೂ ವಿದ್ಯಾರ್ಥಿಗಳು ಮಾತ್ರ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಹೌದು, ನಗರದ ಮಧ್ಯ ಭಾಗದಲ್ಲಿರುವ ಸರ್ಕಾರಿ ಮಹಿಳಾ ಪದವೀ ಪೂರ್ವ ಕಾಲೇಜು ನಿರ್ಮಾಣಕ್ಕೆ ಸ್ಥಳೀಯ ಜನ ಪ್ರತಿನಿಧಿಗಳು ಕೋಟಿ ಕೋಟಿ ಅನುದಾನ ನೀಡಿದ್ದಾರೆ. ಆದರೆ ಗುತ್ತಿಗೆದಾರರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದ ಅವಶ್ಯಕತೆಗಳಿಗೆ ಯಾವುದೇ ರೀತಿಯ ಮನ್ನಣೆ ನೀಡದೇ ತಮ್ಮ ಗುತ್ತಿಗೆ ಕೆಲಸ ಮುಗಿಸಿದ್ದಾರೆ. ಕೋಟಿ ಕೋಟಿ ಹಣ ಖರ್ಚಾದರು ವಿದ್ಯಾರ್ಥಿಗಳು ಮೂಲ ಸೌಕರ್ಯ ವಂಚಿತರನ್ನಾಗಿ ಮಾಡಿದೆ.
ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಸುಸಜ್ಜಿತ ಎರಡು ಮಹಡಿಯ ಕಟ್ಟಡವಿದ್ದರೂ, ಇಲ್ಲಿ ಇರುವುದು ಕೇವಲ ಎರಡು ಶೌಚಾಲಯ ಮಾತ್ರ. ಅದರಲ್ಲಿ ಒಂದು ಶಿಕ್ಷಕರಿಗೆ ಮೀಸಲಾಗಿದ್ದು, ವಿದ್ಯಾರ್ಥಿನಿಯರ ಪಾಲಿಗೆ ಬಂದ ಶೌಚಾಲಯದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿನಿಯರಿಗೆ ಬಯಲು ಪ್ರದೇಶದ ಅವಲಂಬನೆ ಅನಿವಾರ್ಯವಾಗಿದೆ.
ಕೋಟಿ ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಗುತ್ತಿಗೆದಾರರಿಂದ ಅರೆಬರೆ ಕಾಮಗಾರಿಯಾಗಿದೆ. ಕಟ್ಟಡದ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಇನ್ನೂ ಬಾಕಿಯಿದೆ. ನಿರ್ಮಾಣದ ಕೊಠಡಿಗಳಲ್ಲಿ ಸರಿಯಾಗಿ ವಿದ್ಯುತ್ ಸಂಪರ್ಕವಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿಲ್ಲ. ಒಂದು ಬೆಂಚ್ ಮೇಲೆ ನಾಲ್ಕು ಜನ ಕುಳಿತು ಪಾಠ ಕೇಳುವ ಅನಿವಾರ್ಯ ಇಲ್ಲಿನ ವಿದ್ಯಾರ್ಥಿಗಳದ್ದಾಗಿದೆ.
ಅಲ್ಲದೇ ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿನಿಯರಿಗೆ ಅಭದ್ರತೆ ಕಾಡುತ್ತಿದ್ದು, ಹೊರಗಿನ ವ್ಯಕ್ತಿಗಳು ನೇರವಾಗಿ ಕಾಲೇಜು ಪ್ರವೇಶ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದ್ದ ಒಬ್ಬ ಭದ್ರತಾ ಸಿಬ್ಬಂದಿ ಕೂಡ ಅಂಗವಿಕಲರಾಗಿರುವುದರಿಂದ ಎನು ಮಾಡಲು ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ಕೂಡ ಇದೆ. ಈ ನಡುವೆ ಕಳೆದ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಇಲ್ಲಿಯವರು ಎನ್ನುವುದು ವಿಶೇಷ.
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಕಾಲೇಜುಗಳು ಇದ್ದರು, ಇತರ ತಾಲೂಕಿನ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸಕ್ಕೆ ಬರುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೌಕರ್ಯ ಹಾಗೂ ಶಿಕ್ಷಕರ ನೇಮಕಾತಿ ಕುರಿತು ಶಿಕ್ಷಣ ಇಲಾಖೆ ಗಮನಕ್ಕೆ ತಂದರು ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜನವಾಗದಿರುವುದು ಇಲ್ಲಿನ ವಿದ್ಯಾರ್ಥಿಗಳ ದೌಭಾಗ್ಯವೇ ಸರಿ.
ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಕುಂಟೆಪ್ಪ ಗೌರೀಪುರ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳ ಅನುದಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದರೂ, ಕಾಲೇಜಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ನೀರಿನ ಸರಬರಾಜು, ಪೀಠೋಪಕರಣಗಳ ಅವಶ್ಯಕತೆ ಹಾಗೂ ಶಿಕ್ಷಕರ ಕೊರತೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೂಲಭೂತ ಸೌಕರ್ಯ ನೀಡಲು ಮೊದಲ ಆದ್ಯತೆ ನೀಡಲಾಗುದು ಎಂದರು.
ವಿದ್ಯಾರ್ಥಿ ಶಾಂತಮ್ಮ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೇಕಾದ ಮೂಲ ಸೌಕರ್ಯಗಳ ಕೊರತೆಯಿಂದ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಪ್ರಮುಖವಾಗಿ ಕಾಲೇಜಿನಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ಎರಡು ಶೌಚಾಲಯಗಳಿದ್ದು, ಅವುಗಳು ಬಳಕೆಗೆ ಯೋಗ್ಯವಿಲ್ಲ. ಹಾಗಾಗಿ ಬಯಲು ಪ್ರದೇಶಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇನ್ನು ಕೊಠಡಿಯಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಡಿಮೆ ಇರುವುದರಿಂದ ಒಂದು ಬೆಂಚ್ ಮೇಲೆ ನಾಲ್ಕು ಜನ ಕುಳಿತು ಪಾಠ ಕೇಳಬೇಕಿದೆ. ಸದ್ಯ ಕೊರೊನಾ ಭಯ ಕಾಡುತ್ತಿದ್ದು, ಕಾಲೇಜಿಗೆ ಶೌಚಾಲಯ, ಉಪನ್ಯಾಸಕರು, ಭದ್ರತಾ ಸಿಬ್ಬಂದಿ ನೇಮಕಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.