ರಾಯಚೂರು: ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಶಕ್ತಿನಗರದ ಆರ್‌ಟಿಪಿಎಸ್ ಕೇಂದ್ರದ 8ನೇ ಯೂನಿಟ್‌ನ ಎತ್ತರದ ಚಿಮಣಿ ಮೇಲೆ ಏರಿ ಗುತ್ತಿಗೆ ಕಾರ್ಮಿಕ ಬಳಿಕ ಕಂಪನಿಯು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೆಳಗಿಳಿದಿದ್ದಾನೆ.
ಸಣ್ಣ ಸೂಗಪ್ಪ ಎಂಬ ಗುತ್ತಿಗೆ ಕಾರ್ಮಿಕ ಚಿಮಿಣಿ ಮೇಲೇರಿ ಪ್ರತಿಭಟನೆ ನಡೆಸಿದವ. ಕೆಳಗಡೆ ಇಳಿಯುವಂತೆ ಹಲವು ಮನವಿ ಮಾಡಿದರೂ, ಕಾರ್ಮಿಕರ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹಠ ಹಿಡಿದಿದ್ದ. ಕಾರ್ಮಿಕನ ಪ್ರತಿಭಟನೆಗೆ ಸಾವಿರಾರು ಕಾರ್ಮಿಕರು ಬೆಂಬಲ ವ್ಯಕ್ತಪಡಿಸಿದ್ದರು. ಬಳಿಕ ಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಸುವ ಬಗ್ಗೆ ಅ.27ರಂದು ಸಭೆ ನಡೆಸುವ ಕುರಿತು ಲಿಖಿತ ರೂಪ ಪತ್ರ ನೀಡಿದ ಬಳಿಕ ಕಾರ್ಮಿಕ ಚಿಮಣಿಯಿಂದ ಕೆಳಗಡೆ ಇಳಿದಿದ್ದಾನೆ.
ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಗುತ್ತಿಗೆ ಪಡೆದ ಕಂಪನಿ ತನ್ನ ಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ವೇತನ ಹೆಚ್ಚಳ, ಬೋನಸ್ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡಿಲ್ಲ. ಅಲ್ಲದೇ ಗುತ್ತಿಗೆ ಕಾರ್ಮಿಕರಿಗೆ ಅಧಿಕಾರಿಗಳು, ಗುತ್ತಿಗೆದಾರರು ತೊಂದರೆ ನೀಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಹೇಳಿದ್ದರೂ ಈ ಬಗ್ಗೆ ಗಮನಹರಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಕಾರ್ಮಿಕರ ಪ್ರತಿಭಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಲಿಖಿತ ರೂಪದಲ್ಲಿ ಸಭೆ ನಡೆಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಎಲ್ಲಾ ಕಾರ್ಮಿಕರು ತಮ್ಮ ಪ್ರತಿಭಟನೆ ಹಿಂದೆ ಪಡೆದಿದ್ದಾರೆ.
ಇದನ್ನೂ ಓದಿ : ಹಳೆ ಮಾಹಿತಿಯನ್ನೇ ಕಾಪಿ ಪೇಸ್ಟ್ ಮಾಡಿ ತಂದ ಸಿಇಒಗಳಿಗೆ ಚಳಿ ಬಿಡಿಸಿದ ಸಿಎಂ