ರಾಯಚೂರು: ಬೇಸಿಗೆ ಕಾಲದಲ್ಲಿ ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆಯಿಲ್ಲ ಎಂದು ಕೆಪಿಸಿ ವ್ಯವಸ್ಥಾಪಕ ಪೊನ್ನುರಾಜ್ ಹೇಳಿದ್ದಾರೆ.
ರಾಯಚೂರು ತಾಲೂಕಿನ ಶಕ್ತಿನಗರದ ಆರ್ಟಿಪಿಎಸ್ ವಸತಿ ಗೃಹದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸೌರಶಕ್ತಿಯಿಂದ ಅಧಿಕ ವಿದ್ಯುತ್ ಉತ್ಪಾದನೆ ಆಗುವುದರಿಂದ ಬೇಸಿಗೆ ಕಾಲದಲ್ಲಿ ವಿದ್ಯುತ್ ಉತ್ಪಾದನೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಗೆ ಎಸ್ಕಾಂಗಳಿಂದ 18 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಬರಬೇಕಿದ್ದು, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಪರಿಸರ ಸಂರಕ್ಷಣೆಗೆ ಕ್ರಮವಾಗಿ ಡಿಸಲ್ಫರೈಸೇಷನ್ ತಂತ್ರಜ್ಞಾನ ಅಳವಡಿಕೆಗೆ ತಯಾರಿ ನಡೆದಿದೆ. ಆರಂಭದಲ್ಲಿ ಬಿಟಿಪಿಎಸ್, ವೈಟಿಪಿಎಸ್ ಬಳಿಕ ಆರ್ಟಿಪಿಎಸ್ನಲ್ಲಿ ಆಳವಡಿಕೆ ಮಾಡಲಾಗುವುದು. ಇದಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.
ವೈಟಿಪಿಎಸ್ 2ನೇ ಘಟಕ ಬರುವ ತಿಂಗಳಲ್ಲಿ ಉತ್ಪಾದನೆ ಆರಂಭಿಸಲು ಕಾರ್ಯನಿವರ್ಹಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಹಾಗೂ ನೀರಿನ ಸಮಸ್ಯೆಯಿಲ್ಲ. ಕೆಪಿಸಿ ಲಾಭ ಎಸ್ಕಾಂನಿಂದ ಬಾಕಿ ಉಳಿದಿರುವುದಿಂದ ಹಣಕಾಸು ನಿರ್ವಹಣೆಗೆ ತೊಂದರೆ ಉಂಟು ಮಾಡಿದೆ ಎಂದರು. ಪಿಎಲ್ಎಫ್ ಪ್ರಮಾಣ ಕುಸಿತ ಆತಂಕ ತಂದಿದ್ದು, ವರ್ಷಾಂತ್ಯಕ್ಕೆ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯಿದೆ ಎಂದು ತಿಳಿಸಿದರು.
ವಿದ್ಯುತ್ ಬೇಡಿಕೆ ಪ್ರಮಾಣ ತಗ್ಗಿಸಲು ಜಲ ಹಾಗೂ ಸೌರಶಕ್ತಿ ಸಹಕಾರಿಯಾಗಿದೆ. ಬೂದಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಗಳ ಜತೆ ಚರ್ಚಿಸಿ, ಬೂದಿ ಸಾಗಣಿಕೆ ವೇಳೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಎಜಿ ವರದಿನ್ವಯ ಬಿಎಚ್ಇಎಲ್, ವೈಟಿಪಿಎಸ್ ನಿರ್ಮಾಣಕ್ಕೆ ತೋರಿದ ವಿಳಂಬದಿಂದ ಕೆಪಿಸಿಗೆ ನಷ್ಟ ಆಗಿರುವುದು ಸತ್ಯ. ಆದ್ರೆ ವಿಳಂಬಕ್ಕೆ ಕೆಪಿಸಿ ಕಾರಣವಾಗಿದ್ದು, ಸೂಕ್ತ ರೀತಿಯಲ್ಲಿ ದಂಡ ವಿಧಿಸಲು ಸಮಿತಿ ರಚಿಸಲಾಗಿದೆ. ಸಮಿತಿಯ ಸಲಹೆಯಂತೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ರು.