ರಾಯಚೂರು : ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ರಾಯಚೂರು ಜಿಲ್ಲೆಯಲ್ಲಿ ಬರ ಪರಿಶೀಲನೆ ನಡೆಸುತ್ತಿದ್ದಾರೆ.
ಲಿಂಗಸೂಗೂರು ತಾಲೂಕಿನ ಛತ್ರ ಗ್ರಾಮಕ್ಕೆ ಆಗಮಿಸಿದ ಬಿಎಸ್‌ವೈ, ಗ್ರಾಮದಲ್ಲಿನ ಶ್ರೀ ಮಾರುತೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ನೇರವೇರಿಸಿದ್ರು. ಬಳಿಕ ರಾಮಾಜೀ ತಾಂಡಕ್ಕೆ ಭೇಟಿ ನೀಡಿ ಗ್ರಾಮದಲ್ಲಿನ ಕುಡಿಯುವ ನೀರಿನ ಕುರಿತು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ಕುಡಿಯುವ ನೀರಿನ ಸಮಸ್ಯೆ ಮತ್ತು ನರೇಗಾ ಯೋಜನೆಯಡಿ ಜನರಿಗೆ ಕೆಲಸ ಸೇರಿದಂತೆ ಬರ ಕಾಮಗಾರಿ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡದಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಹಾಗೂ ಉದ್ಯೋಗ ನೀಡಲು ಸರ್ಕಾರ ವಿಫಲವಾಗಿದೆ. ಛತ್ತರ ತಾಂಡದಲ್ಲಿ ಜನರಿಗೆ ಉದ್ಯೋಗ ನೀಡಿಲ್ಲ. ಇನ್ನೆರಡು ದಿನದಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ವಿರುದ್ದ ಮುಖ್ಯಮಂತ್ರಿಗಳ ಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಧ್ಯಮಗಳಿಗೆ ಏನೂ ಮಾಡಲು ಸಾಧ್ಯವಿಲ್ಲ, ನಿಮ್ಮೊಂದಿಗೆ ನಾವಿದ್ದೇವೆ. ಮುಂದೆ ಸದನದಲ್ಲಿ ಮಾಧ್ಯಮಗಳ ಪರವಾಗಿ ಮಾತನಾಡುತ್ತೇನೆ ಎಂದರು.
ಸಿಎಂ ಯಾವ ಕಾರಣಕ್ಕೆ ಗ್ರಾಮ ವಾಸ್ತವ್ಯ ಮಾಡುತ್ತಾರೆ? ಕೇವಲ ಶಾಲೆಯಲ್ಲಿ ವಾಸ್ತವ್ಯ ಹೂಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ತಾಲೂಕಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕುರಿತು ಕ್ರಮ ಕೈಗೊಳ್ಳದ ಅಧಿಕಾರಳ ವಿರುದ್ಧ ಗರಂ ಆದ ಮಾಜಿ ಸಚಿವ ಗೋವಿಂದ ಕಾರಜೋಳ, ನೀವು ಏನ್ ಕತ್ತೆ ಕಾಯ್ತಿದಿರಾ ? ಎಂದು ಲಿಂಗಸೂಗೂರು ತಹಸಿಲ್ದಾರ ಚಂದ್ರಶೇಖರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.