ರಾಯಚೂರು : ರಾಜ್ಯದ ನೀರಾವರಿ ಯೋಜನೆ ಕುರಿತಂತೆ ಸದನದಲ್ಲಿ ಧ್ವನಿ ಎತ್ತದ ರಾಜ್ಯದ ಬಿಜೆಪಿ ಸಂಸದರಿಗೆ ಬಳೆ ಮತ್ತು ಹೂವು ಮುಡಿಸುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ರಾಜ್ಯದಿಂದ 26 ಸಂಸದರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಲಾಗಿದೆ. ಸಂಸತ್ತಿನಲ್ಲಿ ರಾಜ್ಯದ ಜನರಿಗೆ ಪೂರಕವಾಗುವ ಯೋಜನೆಗಳನ್ನ ಜಾರಿಗೊಳಿಸಲು ಪ್ರಯತ್ನಿಸಬೇಕು.
ಅಂತಹ ಪ್ರಯತ್ನ ಮಾಡುವಲ್ಲಿ ವಿಫಲವಾಗಿದ್ದಾರೆ. ರಾಜ್ಯದ ಪರವಾಗಿ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ತರುವುದಕ್ಕೆ ಕೈಲಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಮಣ್ಣಿನ ಮಗನೆಂದು ಜನರಿಂದ ಬಿರುದು ಪಡೆದ ಹಾಗೂ ನೀರಾವರಿ ಯೋಜನೆ ಬಗ್ಗೆ ಕಾಳಜಿಯುಳ್ಳಂತಹ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೃಷಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆಯನ್ನಾಗಿ ಜಾರಿಗೊಳಿಸಬೇಕೆಂದು ಸದನದಲ್ಲಿ ವಿಷಯ ಪ್ರಸ್ತಾಪಿಸುವ ಮೂಲಕ ನೀರಾವರಿಗೆ ಒತ್ತಾಯಿಸಿದ್ದಾರೆ.
ಈ ಕಾಳಜಿಗಾಗಿಯೇ ದೇವದುರ್ಗ ತಾಲೂಕಿನ ರೈತ ಪ್ರಭುರೆಡ್ಡಿ ಎಂಬುವರು ಮಾಜಿ ಪ್ರಧಾನಿ ದೇವೇಗೌಡರ ಮೂರ್ತಿಯನ್ನು ಸ್ಥಾಪಿಸಿ, ಗೌರವ ಸಲ್ಲಿಸಿದ್ದಾರೆ.
ಆದ್ರೆ, ಬಿಜೆಪಿಯಿಂದ ಆಯ್ಕೆಯಾದ ಸಂಸದರು ಸದನದಲ್ಲಿ ಇಂತಹ ಯೋಜನೆ ಬಗ್ಗೆ ಚರ್ಚೆ ಮಾಡದೇ, ಒತ್ತಾಯ ಮಾಡದೇ ಮೌನವಹಿಸಿದ್ದಾರೆ. ಹೀಗಾಗಿ, ಅಂತಹ ಸಂಸದರಿಗೆ ಹೂ ಹಾಗೂ ಬಳೆಗಳನ್ನ ಪೋಸ್ಟ್ ಮೂಲಕ ಕಳುಹಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.