ರಾಯಚೂರು : ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜಿಲ್ಲೆಯ ಏಳು ತಾಲೂಕಿನಲ್ಲಿಯೂ ಅಂಗಡಿ-ಮುಗಟ್ಟುಗಳನ್ನ ಬಂದ್‌ಗೊಳಿಸಿದ್ರೆ, ಸಾರಿಗೆ ಸೇವೆಯು ಸ್ಥಗಿತಗೊಳುವ ಮೂಲಕ ಅಕ್ಷರಶಃ ಬಿಸಿಲೂರು ಸ್ಥಬ್ಧವಾಗಿತ್ತು.
ನಿತ್ಯ ಜನ ದಟ್ಟಣೆಯಿಂದಿರುತ್ತಿದ್ದ ತರಕಾರಿ ಮಾರುಕಟ್ಟೆ, ಕೇಂದ್ರೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ನಿತ್ಯ ನೂರಾರು ಸಂಖ್ಯೆಯಲ್ಲಿ ಓಡಾಡುತ್ತಿದ್ದ ಬಸ್‌ಗಳು ರಸ್ತೆಗಿಳಿಯದೆ ಡಿಪೋದಲ್ಲಿ ನಿಲುಗಡೆಯಾಗಿದ್ದವು. ಇನ್ನು ಕೆಲವೊಂದು ರಾಜ್ಯಗಳಿಂದ ಎಕ್ಸ್ಪ್ರೆಸ್ ರೈಲುಗಳು ಮತ್ತು ಬಸ್‌ಗಳು ಮೂಲಕ ಬಂದಿಳಿದಿದ್ದ ಪ್ರಯಾಣಿಕರು ಸ್ವಗ್ರಾಮಕ್ಕೆ ತೆರಳಲು ಬಸ್ಗಳ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿತ್ತು.
ಜನತಾ ಕರ್ಫ್ಯೂ ನಿಂದಾಗಿ ಜಿಲ್ಲೆಯ ಜನತೆ ಬೆಳಿಗ್ಗೆಯಿಂದ ಹೊರಗಡೆ ಬಾರದೆ ಮನೆಯಲ್ಲಿ ಕಾಲ ಕಳೆದರು. ಇದರಿಂದಾಗಿ ಬಡಾವಣೆಗಳು ಬಣ ಬಣ ಎನ್ನುತ್ತಿದ್ದವು. ಸಂಜೆ 5ಕ್ಕೆ ಮನೆಯಿಂದ ಹೊರಗಡೆ ಬಂದು ಕೊರೊನಾ ವೈರಸ್ ಹರಡದಂತೆ ಅವಿರತವಾಗಿ ಪ್ರತ್ಯಕ್ಷ-ಪರೋಕ್ಷವಾಗಿ ಶ್ರಮಿಸಿದವರಿಗೆ ಚಪ್ಪಾಳೆ ತಟ್ಟುವ ಮೂಲಕ ಧ್ಯನವಾದ ಹೇಳಿದರು.