ರಾಯಚೂರು: ಕೇಂದ್ರ ಸರ್ಕಾರ ಎನ್‌ಆರ್‌ಇಜಿ ಕೂಲಿ ಮಾಡಿದವರಿಗೆ ಮೂರು ತಿಂಗಳಿಂದ ಹಣ ಕೊಟ್ಟಿಲ್ಲ. ನಾವು ಹೋಗಿ ಒತ್ತಾಯ ಮಾಡಿದ ಮೇಲೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ 216 ತಾಲೂಕಿಗಳಿಗೆ 17 ಸಾವಿರ ಕೋಟಿ ಬರಗಾಲ ಪರಿಹಾರ ಕೇಳಿದ್ದೇವೆ. ಆದರೆ, ಇನ್ನೂ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಹಣ ತಡವಾಗಿಯಾದರೂ ಕೊಡಲಿ ಅಥವಾ ಬೇಗ ಕೊಡಲಿ, ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಭೇಟಿಯಾಗಲೂ ಸಚಿವರು ನಮಗೆ ಕಾಲಾವಕಾಶ ಕೊಟ್ಟಿಲ್ಲ, ಕೃಷಿ ಇಲಾಖೆ ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗಳನ್ನು ಭೇಟಿಯಾಗಿ ಬಂದಿದ್ದೇವೆ. ಮುಖ್ಯಮಂತ್ರಿ ಸಹ ಪತ್ರ ಬರೆದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಈಗ ಮೈತ್ರಿಗೆ ಓಡಾಡುತ್ತಿದ್ದಾರಲ್ಲ, 28 ಜನ ಸಂಸದರಲ್ಲಿ ಡಿ.ಕೆ.ಸುರೇಶ್ ಬಿಟ್ಟರೆ 27 ಜನರಲ್ಲಿ ಒಬ್ಬರು ಪಕ್ಷೇತರ ಸೇರಿದಂತೆ ಎಲ್ಲ ಸಂಸದರಿದ್ದಾರೆ. ಸರ್ವಪಕ್ಷ ನಿಯೋಗಕ್ಕೆ ಟೈಮ್ ಕೊಡಲ್ಲ, ಬರಗಾಲ ಚರ್ಚೆಗೆ ಟೈಮ್ ಕೊಡಲ್ಲ, ಹಣವನ್ನೂ ಬಿಡುಗಡೆ ಮಾಡಲ್ಲ. 27 ಜನ ನಿಯೋಗ ತೆಗೆದುಕೊಂಡು ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹೆಚ್. ಡಿ. ಕುಮಾರಸ್ವಾಮಿ ಕೇಂದ್ರಕ್ಕೆ ನಿಯೋಗ ಹೋಗಬಹುದಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬರಗಾಲದ ಹಿನ್ನೆಲೆ ಪಾಪ ಹೆಚ್.ಡಿ.ಕುಮಾರಸ್ವಾಮಿ ಯಾತ್ರೆ ಮಾಡಲೇಬೇಕು. ಅವರು ಈ ಹಿಂದೆ ಸಿಎಂ ಆಗಿದ್ದಾಗ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಸಾಲ ಮನ್ನಾ ಅಂತ ಹಲವಾರು ಕಂಡೀಷನ್ ಹಾಕಿದ್ದರು. ಹಣಕಾಸು ಇಲಾಖೆಯಿಂದ ಒಂದು ರೂಪಾಯಿ ಬಿಡುಗಡೆ ಆಗಲಿಲ್ಲ. ಬಸವರಾಜ ಬೊಮ್ಮಾಯಿ ಬಂದಾಗ ಏನೋ ಸ್ವಲ್ಪ ಮಾಡಿದ್ದಾರೆ. ರೈತರು ಯಾರು ಸಾಲ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ, ಅವರೆಲ್ಲಾ ಸುಸ್ತಾಗಿದ್ದಾರೆ. ರೈತರ ಸಮಸ್ಯೆಗಳೆಲ್ಲಾ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಲೋಕಸಭಾ ಚುನಾವಣೆ ಇದೆ. ಯಜಮಾನರು ಫ್ರೀಯಾಗಿದ್ದಾರಲ್ಲಾ ಸುತ್ತಾಡಲಿ. ಅವರು ಒಳ್ಳೆಯ ಸಲಹೆಗಳನ್ನು ಕೊಟ್ಟರೆ ತೆಗೆದುಕೊಳ್ಳೋಣ. ಹಿಂದೆ ಎರಡು ಬಾರಿ ಅಧಿಕಾರದಲ್ಲಿದ್ದಾಗ ಯಜಮಾನರು ಏನ್ ಮಾಡಿದ್ದಾರೆ ಅನ್ನೋದನ್ನು ನೋಡಿದ್ದೇವೆ ಎಂದು ಹೆಚ್‌ಡಿಕೆ ಲೇವಡಿ ಮಾಡಿದರು.
ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಸೇರ್ಪಡೆಯಾಗಿ ಅಂತ ಡಿಕೆಶಿ ಹೇಳಿದ್ದಾರೆ. ಮುಖ್ಯಮಂತ್ರಿ ಯಾರು ಯಾವಾಗ ಏನು ಅಂತ ನಿರ್ಧಾರ ಮಾಡೋದಕ್ಕೆ ಕಾಂಗ್ರೆಸ್ ಪಕ್ಷ ಇದೆ. ಕುಮಾರಸ್ವಾಮಿ ಈಗಾಗಲೇ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಸರಿಯಾದ ಮಾನ್ಯತೆ ಸಿಗದೇ ಇದ್ದರೆ, ಈ ಕಡೆ ತಿರುಗಿ ನೋಡ್ತಾರೆನೋ ಅಂತ ಕಾಣುತ್ತೆ. ಬಿಜೆಪಿಯವರು ಚುನಾವಣೆಗಾಗಿ ಬರ ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಮೇಲೆ ಬಿಜೆಪಿಯವರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ನೆಪದಲ್ಲಿ ಓಡಾಡುತ್ತಿದ್ದಾರೆ. ಇಲ್ಲಿ ಬರ ಅಧ್ಯಯನ ಮಾಡುವುದಲ್ಲಾ, ಕೇಂದ್ರಕ್ಕೆ ಕೊಟ್ಟಿರುವ ಮನವಿಯ ಹಣ ಬಿಡುಗಡೆ ಮಾಡಿಸಲಿ. 17 ಸಾವಿರ ಕೋಟಿ ಹಣ ತರಲಿ, ವಿಧಾನಸೌಧದಲ್ಲಿ ನಾನೇ ಮುಖ್ಯಮಂತ್ರಿಗೆ ಹೇಳಿ ಸನ್ಮಾನ ಮಾಡಿಸುತ್ತೇವೆ ಎಂದರು.
ಸರ್ಕಾರದಿಂದ ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಏನು ಮಾಡುತ್ತೋ ನೋಡುತ್ತೇವೆ, ಬರುವ 2023 ನ. 9ಕ್ಕೆ ಕ್ಯಾಬಿನೆಟ್ ಸಭೆ ಇದೆ. ಟಾಸ್ಕ್ ಫೋರ್ಸ್ ಕಮಿಟಿ ವರದಿ ಮೇಲೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಫೆರಿಪರಲ್ ರಿಂಗ್ ರೋಡ್ ನಿರ್ಮಾಣ : ಸಚಿವ ಬೈರತಿ ಸುರೇಶ್