ರಾಯಚೂರು: ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಬಳಿಕ ಗಂಡನ ಮನೆಯವರು ಚೈತ್ರಾ ಎಂಬ ಯುವತಿಯನ್ನು ನೇಣುಹಾಕಿ ಕೊಂದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಗ್ರಾಮದಲ್ಲಿ ನಡೆದಿದೆ.
ಚೈತ್ರಾ ಭೂಪುರಗೆ (19) ಮೃತ ಯುವತಿ. 2021ರ ಜುಲೈ ತಿಂಗಳಿನಲ್ಲಿ ತಾಲೂಕಿನ ಜೂಲಗುಡ್ಡ ಗ್ರಾಮದ ಚೈತ್ರಾಳನ್ನು ಕಸಬಾಲಿಂಗಸುಗೂರು ಗ್ರಾಮದ ಕುಪ್ಪಣ್ಣ ಎಂಬುವವರ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ಸಮಯದಲ್ಲಿ ಬಂಗಾರ, ವಾಚ್, ಬಟ್ಟೆ ಜೊತೆಗೆ ವರದಕ್ಷಿಣೆ ಸಹ ನೀಡಲಾಗಿತ್ತು. ಕೆಲ ತಿಂಗಳ ನಂತರ ಕಾರು ಖರೀದಿಗೆ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಹಣ ತರುವಂತೆ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎನ್ನಲಾಗ್ತಿದೆ.
ಶನಿವಾರ ಮಧ್ಯಾಹ್ನ ಚೈತ್ರಾಗೆ ಗಂಡನ ಮನೆಯವರು ಹೊಡೆದು, ಬಳಿಕ ನೇಣು ಹಾಕಿ ಕೊಲೆ ಮಾಡಿರುವ ಮಾಹಿತಿ ಆಧರಿಸಿ ಕೊಲೆಯಾದ ಚೈತ್ರಾಳ ತಂದೆ ಬಸವರಾಜ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಭೀಮಾತೀರದ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಅಧಿಕಾರಿಗಳು
ಮೃತಳ ಗಂಡ ಕುಪ್ಪಣ್ಣ ಹಾಗೂ ಕುಟುಂಬಸ್ಥರಾದ ಕುಪ್ಪಮ್ಮ, ನಾಗಪ್ಪ, ನಿರುಪಾದಿ, ಮಲ್ಲಪ್ಪ, ನಾಗಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ತಂಡ ರಚಿಸಿದ್ದಾರೆ.