ಲಿಂಗಸುಗೂರು : ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆ ಅನುಷ್ಠಾನ ವೈಫಲ್ಯತೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಮಿತಿ ತಹಶೀಲ್ದಾರರಿಗೆ ದೂರು ಸಲ್ಲಿಸಿದೆ.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ದೂರಿನ ಪ್ರತಿಯನ್ನು ತಹಶೀಲ್ದಾರರ ಮೂಲಕ ಸಲ್ಲಿಸಿದರು, ಇಂಟಿಗ್ರೆಟೆಡ್ ಪವರ್ ಡೆವಲಪಮೆಂಟ್ ಸ್ಕೀಮ್ ಸದ್ಬಳಕೆ ಮಾಡಿಕೊಳ್ಳುವಲ್ಲಿ ಜೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
2017 ರಲ್ಲಿ ನಗರಗಳ ಹಳೆಯ ವಿದ್ಯುತ್ ಪ್ರಸರಣ ಜಾಲಗಳ ಬಲವರ್ಧನೆಗೆ . 11.4 ಕೋಟಿ ಹಣ ನೀಡಲಾಗಿತ್ತು. ನಾಸಿಕ್ ಮೂಲದ ಕಂಪನಿಗೆ ಟೆಂಡರ್ ನೀಡಿ, ಲಿಂಗಸುಗೂರು ಉಪ ವಿಭಾಗದ ಹಟ್ಟಿ, ಮುದಗಲ್, ಲಿಂಗಸುಗೂರು, ಸಿಂಧನೂರು ಪ್ರದೇಶಗಳ ಕಾಮಗಾರಿಯನ್ನು 2018 ರಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು.
ಸಿಂಗಲ್ ಲೈನ್ ಡೈಗ್ರಾಮ ಪ್ರಕಾರ ಶೇಕಡ 60 ರಷ್ಟು ಕಾಮಗಾರಿ ನಡೆದಿದೆ ಎನ್ನಲಾಗಿದೆ, ಇದೀಗ ಕಾಮಗಾರಿ ಪೂರ್ಣಗೊಳಿಸದೇ ಕೆಲಸ ಪೂರ್ಣಗೊಂಡಿದೆ ಎಂದು ಉಳಿದ ಹಣ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸುವಂತೆ ಆಗ್ರಹಿಸಿದರು.
ಪಟ್ಟಣಗಳಲ್ಲಿ ಹಳೆಯ ಕಂಬ, ವಯರ್, ಟಿಸಿ ಸ್ಥಳಾಂತರಿಸುವ ಕೆಲಸ ಭಾಗಶಃ ಆಗಿಲ್ಲ. ಆಗಿರುವ ಕೆಲಸ ಪ್ರತಿಷ್ಠಿತರ ಬಡಾವಣೆಗಳ ಪಾಲಾಗಿವೆ. ಶಾರ್ಟ್ ಕ್ಲೋಸ್ ನೆಪದಲ್ಲಿ ಹಣ ನುಂಗಿ ಹಾಕುವ ಸಂಚು ನಡೆದಿದೆ. ಕೂಲಂಕಷ ತನಿಖೆ ನಡೆಸಿ ಸರ್ಕಾರದ ಆಶಯದಂತೆ ಯೋಜನೆಗಳು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.