ರಾಯಚೂರು : ಅನ್ಯ ಕೋಮಿನ ಸ್ನೇಹಿರಿಬ್ಬರು ಕಷ್ಟಪಟ್ಟು ದುಡಿದು ಬಂದ ಆದಾಯದಲ್ಲಿ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ವೆಚ್ಚ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಸಮಸ್ಯೆಗೆ ಉಂಟಾಗಿರುವ ನಿರ್ಗತಿಕರಿಗೆ, ರಸ್ತೆಯ ಬದಿಯಲ್ಲಿರುವವರಿಗೆ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಕಳೆದ 19 ದಿನಗಳಿಂದ ನಿತ್ಯ ಊಟವನ್ನ ನೀಡುತ್ತಿದ್ದಾರೆ. ಲಾಕ್ ಡೌನ್ ನಿಂದ ಪರದಾಡುತ್ತಿರುವ ಬಡವರಿಗೆ ತಮ್ಮಿಂದ ಏನಾದರೂ ಸಹಾಯ ಮಾಡಬೇಕು ಎನ್ನುವ ದೃಷ್ಠಿಯಿಂದ ಜಿಲ್ಲೆಯ ಆಲ್ಕೋಡದ ನಿವಾಸಿಯಾಗಿರುವ ಸಂತೋಷ ಸ್ವಾಮಿ ಹಾಗೂ ಯರಗೇರಾ ಗ್ರಾಮದ ಸಾಧಿಕ್ ಎಂಬುವವರು ನಿತ್ಯ ಇಪ್ಪತ್ತೈದರಿಂದ ಮೂವತ್ತು ಜನರಿಗೆ ಊಟ, ಉಪಹಾರ ಹಾಗೂ ಹಣ್ಣು, ನೀರಿನ ಬಾಟಲಿಯನ್ನ ನೀಡಿ ಮಾನವೀಯತೆ ಮೆರೆದಿದ್ದಾರೆ.
ಆಟೋಮೊಬೈಲ್ ನಲ್ಲಿ ಕೆಲಸ ಮಾಡುವ ಸಂತೋಷ ಹಾಗೂ ಸಮಾಜ ಸೇವೆ ಮಾಡುವ ಸಾಧಿಕ್ ಇಬ್ಬರೂ ಕೂಡ ತಮ್ಮ ತಮ್ಮ ಮನೆಯಿಂದಲೇ ಆಹಾರ ತಯಾರಿಸಿ ಹಸಿದವರಿಗೆ, ಲಾಕ್ಡೌನ್ ಸಂಕಷ್ಠಕ್ಕೆ ಸಿಲುಕಿರುವವರಿಗೆ ನೀಡುತ್ತಿದ್ದಾರೆ.
ಈ ಇಬ್ಬರೂ ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದಾರೆ, ನಮ್ಮಿಬ್ಬರದು ಬೇರೆ ಬೇರೆ ಧರ್ಮವಾದರೂ ನಮ್ಮ ಸ್ನೇಹಕ್ಕೆ, ನಾವು ಮಾಡುವ ಕಾರ್ಯಕ್ಕೆ ಧರ್ಮ ಅಡ್ಡಬಂದಿಲ್ಲ. ದೇಶವೇ ಜಾತ್ಯತೀತ ರಾಷ್ಟ್ರವಾದಗ ನಾವು ಏಕೆ ಜಾತಿ ಬಗ್ಗೆ ತಲೆಕೊಡಿಸಿಕೊಳ್ಳಬೇಕು ಎಂಬುದು ಇವರ ಮಾತು, ಜೊತೆಗೆ ಇವರ ಈ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.