ರಾಯಚೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸಮಾನ ವೇತನ ನೀಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಮುದ್ದುಕೃಷ್ಣ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ವೇತನ ಪರಿಷ್ಕರಣೆ 1ನೇ ಜನವರಿ 2020ರಿಂದಲೇ ಜಾರಿಯಾಗಬೇಕಿತ್ತು. ಆದರೆ, ವಿಳಂಬವಾಗಿದೆ. ಸಾರಿಗೆ ನೌಕರರು ಶ್ರಮ ಜೀವಿಗಳಾಗಿದ್ದಾರೆ. ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಆದ್ದರಿಂದ ಸರ್ಕಾರ ಇವರನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ, ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ 25 ವರ್ಷಗಳಿಂದ ಈ ವೇತನ ತಾರತಮ್ಯ ಮುಂದುವರೆದಿದೆ. ಆದ್ದರಿಂದ ವೇತನ ಪರಿಷ್ಕರಣೆ ಮತ್ತು ಸಮಾನ ವೇತನ ನೀಡಲು ಒತ್ತಾಯಿಸಿ, ಫೆ.11ರಂದು ಪ್ರಾದೇಶಿಕ ಸಾರಿಗೆ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದರು.