ರಾಯಚೂರು: ತುಂಗಭದ್ರಾ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆಗೆ ನೀರಿನ ಅಲಭ್ಯತೆ ಎದುರಾಗುವ ಸಂಭವ ಹೆಚ್ಚಿದೆ ಎಂದು ಕೆಎನ್ಎಂಎಲ್ ಮುಖ್ಯ ಅಭಿಯಂತರ ಮಂಜಪ್ಪ ಹೇಳಿದರು.
ಜಲಾನಯನ ಪ್ರದೇಶದಲ್ಲಿ ಅಕ್ರಮ ನೀರಾವರಿ ಹೆಚ್ಚಾಗಿದೆ. ಎಲ್ಲರೂ ಭತ್ತ ಬೆಳೆಯಲು ಮುಂದಾಗಿರುವುದರಿಂದ ನೀರಾವರಿ ಪ್ರದೇಶದ ರೈತರಿಗೆ ಸಮರ್ಪಕ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಜಲಾಶಯದಲ್ಲಿ ನೀರಿನ ಸಂಗ್ರಹಮಟ್ಟ ಹಾಗೂ ನೆರೆ ರಾಜ್ಯಗಳ ಪಾಲಿನ ನೀರು ನೀಡಿದಲ್ಲಿ ರಾಜ್ಯದ ತುಂಗಭದ್ರಾ ಜಲಾನಯನ ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆಗೆ ಸುಮಾರು 25 ಟಿಎಂಸಿ ನೀರು ಅಲಭ್ಯತೆ ಎದುರಾಗುವ ಸಂಭವ ಹೆಚ್ಚಿದೆ.
ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ನವಲಿ ಹತ್ತಿರ ಸಮನಾಂತರ ಜಲಾಶಯ ನಿರ್ಮಿಸುವ ಕುರಿತು ನೆರೆಯ ಎರಡು ರಾಜ್ಯಗಳೊಂದಿಗೆ ಚರ್ಚೆ ನಡೆದಿದ್ದು, 14 ಕೋಟಿ ವೆಚ್ಚದಲ್ಲಿ ನವಲಿ ಜಲಾಶಯ ನಿರ್ಮಾಣದ ಡಿಪಿಆರ್ ಮುಂದಿನ ನಾಲ್ಕು ತಿಂಗಳಲ್ಲಿ ಸಿದ್ಧವಾಗಲಿದೆ ಎಂದರು.