ರಾಯಚೂರು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನ ಅ. 30ರೊಳಗೆ ಜಾರಿಗೊಳಿಸಬೇಕೆಂದು ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದನ್ನು ಸರ್ಕಾರ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಆದರೂ ಕೂಡ ಸರ್ಕಾರ ವರದಿಯನ್ನು ಜಾರಿಗೊಳಿಸುವುದಕ್ಕೆ ವಿಳಂಬ ಮಾಡುತ್ತಿದೆ. ವಾಲ್ಮೀಕಿ ಸಮುದಾಯದವರು ಶೈಕ್ಷಣಿಕ, ಉದ್ಯೋಗ, ಆರ್ಥಿಕವಾಗಿ ಹಿಂದುಳಿದಿರುವುದರಿಂದ ಆ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ 7.5ರಷ್ಟು ಮೀಸಲಾತಿಯನ್ನ ಜಾರಿಗೊಳಿಸಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದರು.
ಈಗಾಗಲೇ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೂ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಈ ವಿಳಂಬ ನೀತಿಯನ್ನ ಖಂಡಿಸಿ ಅ. 30ರಂದು ಹೋರಾಟದ ಮೂಲಕ ಒತ್ತಾಯಿಸಲಾಗುವುದು ಎಂದರು. ಇನ್ನು ಶ್ರೀ ಮಠಕ್ಕೆ ಸೇರಿದ ಅಂಗ ಸಂಸ್ಥೆಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಮಾಡಿದ್ದು, ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ರು.