ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪುತ್ರ ವ್ಯಾಮೋಹಕ್ಕೆ ಒಳಗಾಗಿ ವಿಶ್ರಾಂತ ಕುಲಪತಿ ತಮ್ಮ ಮಗನಿಗೆ ಕೃಷಿ ಕೋಟಾದಡಿ ಅಕ್ರಮ ಪ್ರವೇಶಾತಿ ನೀಡಿರುವುದು ಸಾಬೀತಾಗಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಬಿ.ವಿ. ಪಾಟೀಲ್ ಅವರು ತಮ್ಮ ಪುತ್ರ ವಿನಯ್ ಪಾಟೀಲ್‌ಗೆ ಕೃಷಿ ಕೋಟಾದಡಿ ಬಿ.ಎಸ್ಸಿ (ಕೃಷಿ) ಪದವಿ ನಿಯಮ ಅನುಸಾರವಾಗಿ ಪ್ರವೇಶಾತಿ ಕಲ್ಪಿಸಬೇಕು. ಆದರೆ, ಕೃಷಿ ಕೋಟಾದಡಿ ಅಕ್ರಮವಾಗಿ ಪ್ರವೇಶಾತಿ ನೀಡಿದ್ದಾರೆ. ಅಲ್ಲದೇ ಬಿಎಸ್ಸಿ (ಪದವಿ), ಎಂಎಸ್ಸಿ (ಕೃಷಿ) ಪದವಿ, ಪಿಎಚ್‌ಡಿಯನ್ನ ಕೂಡ ಪ್ರಧಾನ ಮಾಡಲಾಗಿದೆ.
ಈ ಪದವಿಗಳನ್ನ ಅಕ್ರಮವಾಗಿ ಪಡೆದಿರುವುದು ರುಜುವಾತಾಗಿದೆ. ಹೀಗಾಗಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ನೀಡಿದ ಎಲ್ಲಾ ಪದವಿ ಪ್ರಮಾಣ ಪತ್ರ, ಪಿಎಚ್‌ಡಿಯನ್ನ ಕೂಡಲೇ ರದ್ದುಗೊಳಿಸಿ ಆದೇಶ ನೀಡಲಾಗಿದೆ. ಕೃಷಿ ಆದಾಯ ಪ್ರಮಾಣ ಪತ್ರವನ್ನ ತಿದ್ದಿರುವ ಹಿನ್ನೆಲೆ ಡಾ.ಬಿ.ವಿ. ಪಾಟೀಲ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚಿಸಲಾಗಿದೆ.
ಕೃಷಿಕರ ಮಕ್ಕಳಿಗೆ ಸಿಗಬೇಕಾದ ಬಿಎಸ್ಸಿ (ಕೃಷಿ) ಪದವಿ ಪ್ರವೇಶವನ್ನ ಕಿತ್ತುಕೊಂಡ ಆರೋಪದ ಮೇಲೆ ವಿವಿಯಲ್ಲಿ 2020-21ನೇ ಸಾಲಿಗೆ ಕೃಷಿ ಕೋಟಾದಡಿ ಪ್ರವೇಶ ಪಡೆಯುವ ಓರ್ವ ವಿದ್ಯಾರ್ಥಿಯ ಬಿಎಸ್ಸಿ (ಕೃಷಿ) ಪದವಿಯ ಸಂಪೂರ್ಣ ವೆಚ್ಚ ಭರಿಸುವಂತೆ ಕೃಷಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಅಕ್ರಮ ಪ್ರವೇಶ ಕುರಿತು ಟಿ. ಮಾರೆಪ್ಪ ಕೋರ್ಟ್ ಮೊರೆ ಹೋಗಿದ್ದಾರೆ.