ರಾಯಚೂರು: ಲಿಂಗಸುಗೂರು ಪುರಸಭೆ ಸದಸ್ಯ ಪ್ರಮೋದ ಕುಲಕರ್ಣಿ ರಂಜಾನ್ ಹಬ್ಬದ 27ನೇ ದಿನದಂದು ಸಂಪ್ರದಾಯಿಕವಾಗಿ ಉಪವಾಸ ವ್ರತ ಆಚರಿಸಿ ಸೌಹಾರ್ದತೆ ಮೆರೆದಿದ್ದಾರೆ.
ಹಿಂದೂ ಸಂಪ್ರದಾಯಸ್ಥರಾಗಿದ್ದರೂ ಸಹ ವಿದ್ಯಾರ್ಥಿ ಜೀವನದಿಂದ ಇಲ್ಲಿಯವರೆಗೂ ಮುಸ್ಲಿಂ ಬಾಂಧವರ ಜೊತೆ ಸೇರಿಕೊಂಡು ಇಫ್ತಾರ್ ಕೂಟ ನೆರವೇರಿಸುತ್ತಿದ್ದಾರಂತೆ.
ಈ ಕುರಿತು ಮಾತನಾಡಿದ ಅವರು, ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್ ಆಚರಣೆ ಸಂದರ್ಭದಲ್ಲಿ ರೋಜಾ ಆಚರಿಸಿ ಇಫ್ತಾರ್ ಕೂಟ ಏರ್ಪಡಿಸುತ್ತೇನೆ. ತಮ್ಮ ಅನುಭವದ 25 ವರ್ಷಗಳಲ್ಲಿ ಒಂದೆರಡು ವರ್ಷದ ರೋಜ ತಪ್ಪಿರಬಹುದು. ಆದರೆ, ಪ್ರತಿ ವರ್ಷ 27ನೇ ದಿನದ ರೋಜ ಮಾಡುತ್ತಾ ಬಂದಿರುವೆ. ಈ ವರ್ಷ ಇಫ್ತಾರ್ ಕೂಟ ಏರ್ಪಡಿಸಲು ಅವಕಾಶ ಇಲ್ಲದೆ ಹೋಗಿದ್ದರಿಂದ ಆಯ್ದ ನಾಲ್ಕು ಸ್ನೇಹಿತರ ಜೊತೆ ರೋಜ ಬಿಡುತ್ತಿರುವೆ ಎಂದು ಹೇಳಿದರು.
ಆತ್ಮೀಯರ ಜೊತೆ ಸೇರಿಕೊಂಡು ರೋಜ ಬಿಡುವ ಕುಲಕರ್ಣಿ ಅವರ ಸಹೋದರತ್ವ ಭಾವನೆ ನಮಗೆ ಖುಷಿ ತಂದಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು.