ರಾಯಚೂರು: ನಾನು ಪಕ್ಷ ವಿರೋಧ ಚಟುವಟಿಕೆ ಮಾಡಿರುವುದನ್ನು ಸಾಬೀತು ಪಡಿಸಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಸಣ್ಣ ನೀರಾವರಿ ಖಾತೆ ಸಚಿವ ಎನ್ ಎಸ್ ಬೋಸರಾಜು ಓಪನ್ ಚಾಲೆಂಜ್ ಮಾಡಿದ್ದಾರೆ. ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿ, ಮೊದಲ ಬಾರಿಗೆ ರಾಯಚೂರು ಜಿಲ್ಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಅವರಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಿ ಸ್ವಾಗತ ಕೋರಲಾಯಿತು. ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಯಾರು ಪಕ್ಷದ ಮೇಲೆ ಅಭಿಮಾನದಿಂದ, ನಿಷ್ಠೆಯಿಂದ ಕೆಲಸ ಮಾಡುತ್ತಾರೋ, ಪಕ್ಷ ಅಂತಹವರನ್ನು ಗುರುತಿಸಿ, ಅವರಿಗೆ ಸೂಕ್ತವಾದ ಸ್ಥಾನಮಾನವನ್ನು ಒಂದಲ್ಲ ಒಂದು ದಿನ ನೀಡೇ ನೀಡುತ್ತೆ. ನಮಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲವೆಂದು ರಾಜಕೀಯವಾಗಿ ಎಮೋಷನಲ್ ಆಗಬಾರದು. ಪಾರ್ಟಿಯನ್ನು ವಿರೋಧ ಮಾಡಬಾರದು. ಅಂತಹ ಕೆಲಸವನ್ನು ಮಾಡಿದ್ರೆ, ಅದು ಪಕ್ಷಕ್ಕೆ ದ್ರೋಹ ಬಗೆದಂತೆ ಆಗುತ್ತದೆ. ರಾಜ್ಯದಲ್ಲಿ ಆಗಲಿ ಹಾಗೂ ಜಿಲ್ಲೆಯಾಗಲ್ಲಿ ಎಂದಾದರೂ ಬೋಸರಾಜು ಪಕ್ಷ ವಿರುದ್ಧ ಚಟುವಟಿಕೆ ಮಾಡಿದ್ದರೆ ಹೇಳಿ, ಸಾಬೀತು ಮಾಡಲಿ. ನಾನು ನನ್ನ ಮಂತ್ರಿ ಪದವಿಗೆ ರಾಜೀನಾಮೆ ನೀಡುತ್ತೇನೆ ಸವಾಲು ಹಾಕಿದರು.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಇದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡುವಂತೆ ಕೆಲವರು ಹೇಳಿದರು. ಆದರೆ ಅವರಿಗೆ ಒಂದೇ ಮಾತು ಹೇಳಿದೆ, ಅ ಮಾತನ್ನು ಹೇಳಲು ಹೋಗಬೇಡಿ ಎಂದು. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಪಕ್ಷದ ವಿರುದ್ಧ ಕೆಲಸ ಮಾಡಬಾರದು ಎನ್ನುವ ಮಾತು ಹೇಳಿದೆ. ಪಕ್ಷಕ್ಕೆ ನಿಷ್ಠೆಯಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಒಳಗೊಂದು, ಹೊರಗೊಂದು ಮಾಡುವಂತಹ ಕೆಲಸ ಆಗಬಾರದು. ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಮಾಡಿದರೆ ಖಂಡಿತವಾಗಿ ಸೂಕ್ತವಾದ ಸ್ಥಾನಮಾನ ದೊರೆಯುತ್ತದೆ ಎಂದು ಅವರು ಹೇಳಿದರು.
ರಾಜಕೀಯವಾಗಿ ಯಾರು ಪವರ್ಫುಲ್ ಇರುತ್ತಾರೋ, ಅವರ ಮೇಲೆ ಆರೋಪಗಳು ಜಾಸ್ತಿ ಇರುತ್ತವೆ. ಯಾರು ಕಡಿಮೆ ಪ್ರಭಾವಿ ಇರುತ್ತಾರೋ ಅವರ ಮೇಲೆ ಕಡಿಮೆ ಆರೋಪಗಳು ಇರುತ್ತೆ ಎನ್ನುವಂತದ್ದು ರಾಜಕೀಯ ವ್ಯವಸ್ಥೆಯಲ್ಲಿ ಇರುತ್ತದೆ. ರಾಜಕೀಯದಲ್ಲಿ ಇರುವಾಗ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಅದರಲ್ಲಿ ಪಕ್ಷ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಯಾರಿಗೋ ಯಾವುದರಿಂದಲೋ ಆದ ಸಮಸ್ಯೆಗೆ ಕೆಲವು ಸಮಯದಲ್ಲಿ ನಮ್ಮಂತಹವರ ಮೇಲೆ ಆರೋಪ ಹೊರಿಸುತ್ತಾರೆ. ನಾನು ರಾಜಕೀಯಕ್ಕೆ ಬಂದು 52 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವೆ. ಆದರೆ ಎಂದು ಪಕ್ಷ ವಿರೋಧ ಚಟುವಟಿಕೆ ಮಾಡಿಲ್ಲ ಎಂದು ಬೋಸರಾಜು ಸಮರ್ಥಿಸಿಕೊಂಡರು.
ಇನ್ನು ಆರಂಭದಲ್ಲಿ ನಗರದ ಆರ್‌ಟಿಒ ಸರ್ಕಲ್ನಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಭವ್ಯವಾಗಿ ಸ್ವಾಗತಿಸಲಾಯಿತು. ಅಲ್ಲದೇ ಪಕ್ಷದ ಮುಖಂಡರು, ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಪಕ್ಷದ ಕಚೇರಿಯಲ್ಲಿ ಸನ್ಮಾನಿಸಿ ಬೆಳ್ಳಿಯ ಗದೆ ನೀಡುವ ಮೂಲಕ ಗೌರವಿಸಲಾಯಿತು.
ಇದನ್ನೂ ಓದಿ: ಕೇಂದ್ರ ಸರ್ಕಾರ ಅಕ್ಕಿ ಬದಲಿಗೆ ಜನರ ಖಾತೆಗೆ ಹಣ ಹಾಕುವುದು ಸೂಕ್ತ: ಶಾಸಕ ಬೆಲ್ಲದ್