ರಾಯಚೂರು: ಕ್ಷೇತ್ರದಲ್ಲಿ ಲೂಟಿ ಮಾಡಲು ಬಂದವರು ಯಾರು ಎಂಬುದನ್ನು ಬಹಿರಂಗವಾಗಿ ಚರ್ಚಿಸಲು ಮಾಜಿ ಶಾಸಕ ಮಾನಪ್ಪ ವಜ್ಜಲರಿಗೆ ಶಾಸಕ ಡಿ.ಎಸ್. ಹೂಲಗೇರಿ ಬಹಿರಂಗ ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹೂಲಗೇರಿ, ತಮ್ಮ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡಿರುವೆ. ವಜ್ಜಲರು ಮಾತಿಗೊಮ್ಮೆ ಶಾಸಕರು ಲೂಟಿ ನಡೆಸಿದ್ದಾರೆ ಎಂದು ಹೇಳುತ್ತಿರುವ ಸಂಗತಿ ವಿಷಾದನೀಯ. ದಶಕದ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿ ಗುತ್ತಿಗೆದಾರಿಕೆ ರಕ್ಷಣೆ ಮಾಡಿಕೊಂಡಿದ್ದು ಬಿಟ್ಟರೆ ಬೇರೆ ಇನ್ನೇನು ಮಾಡಿದ್ದಾರೆ ಎಂದು ಕುಟುಕಿದರು.
ನಂದವಾಡಗಿ ಯೋಜನೆ ಹರಿಕಾರ ತಾನೆಂದು ಹೇಳಿಕೊಳ್ಳುವ ನೈತಿಕತೆ ಅವರಿಗಿಲ್ಲ. ಆಗ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ, ಹಂಪಯ್ಯ ನಾಯಕ ಸೇರಿದಂತೆ ಕಾಂಗ್ರೆಸ್ ಮುಖಂಡರು ಶ್ರಮಿಸಿದ್ದಾರೆ. ತಮ್ಮ ವಿರುದ್ಧ ಚುನಾವಣೆ ನಡೆಸಿದ ಕಾಂಗ್ರೆಸ್ನ ಕೆಲ ಮುಖಂಡರನ್ನು ಬಗ್ಗು ಬಡಿಯಲು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಚಿಲ್ಲರೆ ರಾಜಕಾರಣ ಮಾಡುವವರ ಮಾತಿಗೆ ಜನತೆ ಉತ್ತರಿಸುತ್ತಾರೆ ಎಂದು ತಿಳಿಸಿದರು.