ಲಿಂಗಸುಗೂರು : ಡೋಂಗಿ ಜ್ಯೋತಿಷಿಗಳು, ಸ್ವಾಮೀಜಿಗಳ ವಿರುದ್ಧ ವೈಜ್ಞಾನಿಕ ಹೋರಾಟಕ್ಕೆ ಪ್ರಜ್ಞಾವಂತರು ಮುಂದಾಗಬೇಕು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪನಾ ರಾಜ್ಯ ಅಧ್ಯಕ್ಷ ಹುಲಿಕಲ್ ನಟರಾಜ್ ಕರೆ ನೀಡಿದರು.
ರಾಯಚೂರು ಜಿಲ್ಕಾ ಮತ್ತು ತಾಲೂಕು ವೈಜ್ಞಾನಿಕ ಸಂಶೋಧನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು 1994ರಿಂದ ಏಕಾಂಗಿ ಹೋರಾಟ ನಡೆಸುತ್ತ ಬಂದಿದ್ದೆ. ಈಗ ಪ್ರಜ್ಞಾವಂತರ ಸಹಯೋಗದಲ್ಲಿ ರಾಜ್ಯವ್ಯಾಪಿ ಸಂಘಟನೆಯಾಗುತ್ತಿದೆ. ಈಗಾಗಲೇ 32 ಸಾವಿರ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹರ್ಷ ಹಂಚಿಕೊಂಡರು.
ಪರಿಷತ್ ಸದಸ್ಯರಾಗುವವರು ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿರುವ ಮೌಢ್ಯ, ಅಂಧಕಾರ ನಿರ್ಮೂಲನೆಗೊಳಿಸಿ ವೈಜ್ಞಾನಿಕ ವಿಚಾರಧಾರೆಗಳ ಮೂಲಕ ನಾಗರಿಕರ ಮನಸ್ಸು ಪರಿಶುದ್ಧಗೊಳಿಸಿದರೆ ಅದೇ ತಾವು ಸಂಘಟನೆಗೆ ನೀಡುವ ಮಹಾನ್ ಕೊಡುಗೆ ಎಂದು ಮನವಿ ಮಾಡಿದರು.
ಪ್ರಾಥಮಿಕ ಶಾಲಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುಸಂಗಯ್ಯ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಭೀಮಣ್ಣ ನಾಯಕ ಸೇರಿ ಇತರರು ಇದ್ದರು.