ರಾಯಚೂರು: ಜಿಲ್ಲೆಯಾದ್ಯಂತ ನಿನ್ನೆಯಿಂದ ಸತತವಾಗಿ ಜಿಟಿ ಜಿಟಿ ಮಳೆ ಯಾಗುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ನಗರದಲ್ಲಿ ಹಲವು ರಸ್ತೆಗಳು ಹಾಳಾಗಿದ್ದು, ತೆಗ್ಗು, ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೀದಿ ಬದಿಯ ವ್ಯಾಪಾರಿಗಳ ವ್ಯಾಪಾರಕ್ಕೂ ಸಹ ತೊಂದರೆ ಉಂಟಾಗಿದೆ. ಹಲವು ಬಡಾವಣೆಗಳಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಕೆಲವು ಕಡೆ ನಿಂತಿದ್ದು, ಸಾಂಕ್ರಾಮಿಕ ಕಾಯಿಲೆ ಭೀತಿ ಶುರುವಾಗಿದೆ.
ಇನ್ನೂ ಮಳೆ ಆಗುತ್ತಿರುವುದರಿಂದ ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ. ಆದರೆ, ಈರುಳ್ಳಿ ಸೇರಿದಂತೆ ಕೆಲ ಬೆಳೆಗಳಿಗೆ ಸತತ ಮಳೆಯಿಂದಾಗಿ ಕೊಳೆಯುವ ಆತಂಕ ಎದುರಾಗಿದೆ. ಬಿಸಿಲುನಾಡು ಎಂದು ಪ್ರಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ತಂಪಿನ ವಾತಾವರಣ ನಿರ್ಮಾಣವಾಗಿ, ಮಲೆನಾಡಿನಂತೆ ಭಾಸವಾಗುತ್ತಿದೆ.