ರಾಯಚೂರು: ಒಂದೆಡೆ ರಾಯಚೂರು ಜಿಲ್ಲೆ ವರುಣಾರ್ಭಟಕ್ಕೆ ನಲುಗಿದ್ದರೆ, ಇತ್ತ ಆಂಧ್ರಪ್ರದೇಶದ ಮಂತ್ರಾಲಯದಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕಳೆದ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮಂತ್ರಾಲಯದ ರಾಯರ ಮಠದ ಆವರಣದೊಳಗೂ ನೀರು ನುಗ್ಗಿದೆ.
ಮಂತ್ರಾಲಯದಲ್ಲಿ ಸುರಿದ ಭಾರಿ ಮಳೆಗೆ ಹಳ್ಳದ ನೀರು ಉಕ್ಕಿ ಹರಿದು ಕರ್ನಾಟಕ ಗೆಸ್ಟ್ ಹೌಸ್ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಗೆಸ್ಟ್ ಹೌಸ್ ಆವರಣದಲ್ಲಿನ ವಾಹನಗಳಲ್ಲಿ ತೇಲಾಡುತ್ತಿದ್ದು, ಮುಂಭಾಗದ ರಸ್ತೆಯಲ್ಲಿಯೂ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತಿದೆ. ಇದರಿಂದ ರಾಯರ ದರ್ಶನಕ್ಕೆ ತೆರಳುವ ಭಕ್ತರ ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ. ರಾಯರ ದರ್ಶನಕ್ಕೆ ಬಂದು ಕರ್ನಾಟಕ ಗೆಸ್ಟ್ ಹೌಸ್ನಲ್ಲಿ ತಂಗಿದ ಭಕ್ತರು ತೊಂದರೆ ಅನುಭವಿಸುವಂತಾಗಿದೆ.
ಮಂತ್ರಾಲಯದ ಶ್ರೀರಾಘವೇಂದ್ರ ಪುರಂ, ಬಸ್ ನಿಲ್ದಾಣ ಸೇರಿದಂತೆ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಬಾರಿ ಆವಾಂತರ ಸೃಷ್ಟಿಯಾಗಿದೆ. ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಮಂತ್ರಾಲಯ-ಎಮ್ಮಿಗನೂರು ರಸ್ತೆ ಮಧ್ಯೆ ಬರುವ ಹಳ್ಳ ಒಡೆದು, ಮಂತ್ರಾಲಯದೊಳಗೆ ನೀರು ನುಗ್ಗಿ ಜನ-ಜೀವನ ಅಸ್ತವ್ಯಸ್ತಗೊಳಿಸಿದೆ.
ಇದನ್ನೂ ಓದಿ: ಅರೆರೇ.. ಪಂಚೆ ಕಟ್ಟಿ, ತಲೆಗೆ ಮುಟ್ಟಾಲೆ ಇಟ್ಟು.. ಹಡಿಲು ಭೂಮಿಯಲ್ಲಿ ನಾಟಿ ಮಾಡಿದ್ರು ಯು ಟಿ ಖಾದರ್!