ರಾಯಚೂರು : ಚಲನಚಿತ್ರ ನಟರ, ರಾಜಕೀಯ ನಾಯಕರ ಮೇಲಿನ ಅಭಿಮಾನಕ್ಕೆ ಸಂಘ ರಚನೆ, ಸಾಮಾಜಿಕ ಕಾರ್ಯ, ಆದರ್ಶ ಪಾಲನೆ ಮಾಡುವುದನ್ನ ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಭಿಮಾನಿ ಪುತ್ಥಳಿ ಸ್ಥಾಪಿಸಿ ನೆಚ್ಚಿನ ನಾಯಕನಿಗೆ ಭಾರತ ರತ್ನ ಬಿರುದನ್ನು ನೀಡಿದ್ದಾನೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದ ರೈತ ಪ್ರಭುರೆಡ್ಡಿ ಕೊಳ್ಳೂರು ಎಂಬುವರು ತಮ್ಮ ಜಮೀನಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಮೂರ್ತಿ ಸ್ಥಾಪಿಸಿ ಅಭಿಮಾನ ಮೆರೆದಿದ್ದಾನೆ. ಅಲ್ಲದೆ ಪುತ್ಥಳಿ ಮೇಲೆ ಭಾರತ ರತ್ನ, ಕನ್ನಡದ ಕಣ್ಮಣಿ, ದೇವದುರ್ಗ ತಾಲೂಕಿನ ದೊರೆ ಎಂದು ಬಿರುದುಗಳನ್ನು ಬರೆಸಿದ್ದಾನೆ.
ಕೃಷ್ಣ ನದಿ ನೀರನ್ನು ನಾರಾಯಣಪುರ ಬಲದಂಡೆ ನಾಲೆ (ಎನ್ ಆರ್ ಬಿಸಿ) ಯೋಜನೆಯ ಮೂಲಕ ತಾಲೂಕಿಗೆ ನೀಡಿದ್ದಕ್ಕಾಗಿ ಹಾಗೂ ಅವರ ಮೇಲಿನ ಅಭಿಮಾನದಿಂದ ಈ ಪುತ್ಥಳಿಯನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದೇನೆ. 2017ರಲ್ಲಿ ಮೂರ್ತಿ ಸ್ಥಾಪನೆ ಆರಂಭಿಸಲಾಗಿತ್ತು. ಆದರೆ ಕೆಲ ಅಡತಡೆಗಳಿಂದ ಆಗಿರಲಿಲ್ಲ, ಸದ್ಯ ನಿರ್ಮಾಣ ಮಾಡಿದ್ದೇನೆ. ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಸ್ವಚ್ಛಗೊಳಿಸಿ ಮೂರ್ತಿಯನ್ನು ಪೂಜಿಸುವುದಾಗಿ ಪ್ರಭುರೆಡ್ಡಿ ತಿಳಿಸಿದ್ದಾರೆ.