ರಾಯಚೂರು/ವಿಜಯಪುರ: ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆಯನ್ನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಜಿಲ್ಲೆಯಲ್ಲಿ ಒಟ್ಟು 179 ಗ್ರಾಮ ಪಂಚಾಯತಿಗಳಿವೆ. ಇದರಲ್ಲಿ ದೇವದುರ್ಗ ತಾಲೂಕಿನ ಶಾವಂತಗೇರಾ, ಹೇಮನಾಳ ಗ್ರಾಮಗಳ ಗ್ರಾ.ಪಂ. ಪ್ರಕರಣ ಕಲಬುರಗಿ ಉಚ್ಚ ನ್ಯಾಯಲಯದಲ್ಲಿ ಬಾಕಿಯಿವೆ. ಜಾಲಹಳ್ಳಿ, ಕರಡಿಗುಡ್ಡ ಹಾಗೂ ಚಿಂಚೋಡಿ ಗ್ರಾಮ ಪಂಚಾಯತಿ ಮೇಲ್ದರ್ಜೆಗೇರಿಸುವುದರಿಂದ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸದಂತೆ ನಿರ್ದೇಶನ ನೀಡಿದೆ. ಲಿಂಗಸೂಗೂರು ತಾಲೂಕಿನ ರೋಡಲಬಂಡಾ(ತವಗಾ) ಗ್ರಾ.ಪಂ. ಆಡಳಿತ ಅವಧಿ ಇನ್ನೂ ಬಾಕಿಯಿದೆ. ಹೀಗಾಗಿ 179 ಗ್ರಾ.ಪಂ ಪೈಕಿ 173 ಪಂಚಾಯಿತಿಗಳ ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ ಎಂದರು.
ಓದಿ: ಜಾತಿ ಒಡೆಯುವುದು, ಅನಗತ್ಯ ಓಲೈಕೆಯೇ ಸಿದ್ದರಾಮಯ್ಯನವರ ಜಾತ್ಯತೀತತೆ: ಹೆಚ್ಡಿಕೆ ತಿರುಗೇಟು
ಇನ್ನು, ವಿಜಯಪುರ ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಡಿ. 22ರಂದು ನಡೆಯಲಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ವಿಜಯಪುರ, ಬಬಲೇಶ್ವರ, ತಿಕೋಟಾ ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ನಡೆಯಲಿದ್ದು, ಡಿ. 22ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ಜರುಗಲಿದೆ. ಡಿ. 11ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಡಿ. 12ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ. 14ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮರು ಮತದಾನದ ಅವಶ್ಯಕತೆ ಡಿ. 24ರಂದು ಮತದಾನ ನಡೆಯಲಿದ್ದು, ಡಿ. 30ರಂದು ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.