ರಾಯಚೂರು: ಜಿಲ್ಲೆಯಾದ್ಯಂತ ಉತ್ತಮವಾಗಿ ಮಳೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿಗೆ 2020 ರ ಜ.1ರಿಂದ ಜು.23ರವರೆಗೆ ವಾಡಿಕೆಯಂತೆ 217 ಮಿ.ಮೀ. ಮಳೆ ಆಗಬೇಕು. ಆದ್ರೆ, 305 ಮಿ.ಮೀ. ಮಳೆ ಸುರಿಯುವ ಮೂಲಕ ವಾಡಿಕೆಗಿಂತ ಶೇ.41ರಷ್ಟು ಮಳೆ ಜಿಲ್ಲೆಯಲ್ಲಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಮುಂಗಾರು ಹಂಗಾಮು ಆರಂಭವಾಗುವ ಮುನ್ನವೇ ಜಿಲ್ಲೆಯಲ್ಲಿ ಮಳೆ ಸುರಿದ ಕಾರಣ, ಬಿತ್ತನೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಿಲ್ಲೆಯ ಒಟ್ಟು 3,51,082 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 2,64,402 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತೊಗರಿ 47 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಉತ್ತಮ ರೀತಿಯಲ್ಲಿ ಆಗಿರುವ ಕಾರಣ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹತ್ತಿ 86 ಹೆಕ್ಟೇರ್ ಪ್ರದೇಶದಲ್ಲಿ ಗುರಿ ಹೊಂದಿದ್ದರೆ, 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸಜ್ಜೆ 40 ಸಾವಿರ ಹೆಕ್ಟೇರ್ ಬಿತ್ತನೆಯಾಗಲಿದೆ. ಭತ್ತ 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ತುಂಗಭದ್ರಾ, ಕೃಷ್ಣ ನದಿಯಿಂದ ನೀರು ಬಿಡುಗಡೆಯಾದ ಬಳಿಕ ಬಿತ್ತನೆ ಕಾರ್ಯ ಶುರುವಾಗಲಿದೆ.
ಮುಂಗಾರು ಹಂಗಾಮಿಗೆ ಜಿಲ್ಲೆಯ ಯೂರಿಯಾ, ಡಿಎಪಿ, ಎಂಓಪಿ, ಕಾಂಪ್ಲೆಕ್ಸ್, ಎಸ್.ಎಸ್.ಪಿ ರಸಗೊಬ್ಬರ ಒಟ್ಟು 1,71,917 ಮೆಟ್ರಿಕ್ ಟನ್ ಜಿಲ್ಲೆಯ ಬೇಡಿಕೆಯಿದೆ. ಇದರಲ್ಲಿ 75 ಸಾವಿರ ಟನ್ ರಸಗೊಬ್ಬರ ವಿತರಣೆಯಾಗಿದ್ದು, 82 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ರಸಗೊಬ್ಬರ ಕೊರತೆಯಿದೆ ನಿಜ. ಈ ಸಂದರ್ಭದಲ್ಲೂ ರೈತರಿಗೆ ತೊಂದರೆಯಾಗದಂತೆ ಪೂರೈಸಬೇಕು ಎಂದು ನೂತನವಾಗಿ ಆಯ್ಕೆಯಾದ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ, ಕೇಂದ್ರ ಸಚಿವ ಸದಾನಂದ ಗೌಡರಿಗೆ ಮನವಿ ಸಲ್ಲಿಸಿದ್ರು.