ರಾಯಚೂರು : ರೈತರ ಅನುಕೂಲಕ್ಕೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಮಾತ್ರ ಲಾಭ ಪಡೆದುಕೊಳ್ಳಬೇಕು. ಆದರೆ, ರೈತರಿಗೆ ಯಾವುದೇ ಮಾಹಿತಿ ನೀಡದೇ ಅವರ ಹೆಸರನ್ನು ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣ ಬೇರೆಯವರ ಖಾತೆಗೆ ಜಮಾ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಸಿರವಾರ ತಾಲೂಕಿನ ಸಣ್ಣಹೊಸೂರು, ಮಾಡಗಿರಿ, ಹರವಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮಾಹಿತಿ ನೀಡದೆ 40ಕ್ಕೂ ಹೆಚ್ಚು ರೈತರ ಪಹಣಿ ದುರ್ಬಳಕೆ ಮಾಡಿಕೊಂಡಿರುವ ಆರೋಪ ಮಾಡಲಾಗಿದೆ. ಸುಮಾರು 75 ಲಕ್ಷದಿಂದ ಒಂದೂವರೆ ಕೋಟಿ ರೂ. ವರೆಗೆ ಅಪರಾತಪರಾ ಆಗಿರುವ ಬಗ್ಗೆ ದೂರು ನೀಡಲಾಗಿದೆ. ಹೆಚ್ಚು ಮಳೆಯಿಂದಾಗಿ ಹಳ್ಳ ಬಂದು ರೈತರ ಬೆಳೆ ಹಾನಿಯಾಗಿತ್ತು. ಈ ಹಣ ಹಾನಿಯಾದ ರೈತರ ಖಾತೆಗೆ ಸಂದಾಯವಾಗುವ ಬದಲು ಬೇರೆಯವರ ಖಾತೆಗೆ ಜಮೆ ಆಗಿದೆ. ಹೀಗಾಗಿ ಸಂಬಂಧಪಟ್ಟವರ ವಿರುದ್ಧ ರೈತರು ಹೋರಾಟಕ್ಕೆ ಸಿದ್ಧವಾಗಿದ್ದಾರೆ. ನಮಗೆ ಇನ್ನೂ ವಿಮೆ ಪರಿಹಾರ ಬಂದಿಲ್ಲ, ನಮ್ಮ ಜಮೀನಿನ ಮೇಲೆ ಇನ್ಯಾರೋ ಪರಿಹಾರ ಪಡೆದಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ದುರುಪಯೋಗ : ಧಾರವಾಡದಲ್ಲಿ 9 ಜನರ ವಿರುದ್ಧ ದೂರು
2022 - 2023 ನೇ ಸಾಲಿನಲ್ಲಿ ಮುಂಗಾರು ಮಳೆ ವಿಪರಿತವಾದ ಹಿನ್ನೆಲೆ ಹಳ್ಳದ ನೀರಿಗೆ ಬೆಳೆ ಕೊಚ್ಚಿಹೋಗಿ ನಷ್ಟ ಉಂಟಾಗಿತ್ತು. ಈ ಸಮಯದಲ್ಲಿ ಕೆಲ ರೈತರು ಬೆಳೆ ವಿಮೆ ಮಾಡಿಸಿದ್ದರೆ, ಇನ್ನೂ ಕೆಲವರು ಮಾಡಿಸಿರಲಿಲ್ಲ. ಇದರಲ್ಲಿ ಬೆಳೆ ವಿಮೆ ಪಾವತಿ ಮಾಡಿದ ರೈತರಲ್ಲಿ ಕೆಲವರಿಗೆ ಹಣ ಬಂದಿದ್ದು, ಉಳಿದವರಿಗೆ ಗೋಲ್ಮಾಲ್ನಿಂದಾಗಿ ಬೇರೆಯವರ ಖಾತೆಗೆ ಹಣ ಹೋಗಿದೆ. ಈ ಬಗ್ಗೆ ರೈತರಿಂದ ಲಿಖಿತ ದೂರು ಪಡೆದಿರುವ ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ ಅವರು, ಜಿಲ್ಲೆಯ ಹಲವು ಕಡೆಯಲ್ಲಿ ಇದೇ ರೀತಿಯ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ರೈತರು ನೀಡಿರುವ ದೂರು ಸ್ವೀಕರಿಸಿದ್ದೇವೆ. 500ಕ್ಕೂ ಹೆಚ್ಚು ರೈತರಿಗೆ ಪರಿಹಾರ ದೊರೆತಿದೆ. ಇದರಲ್ಲಿ 15 ರೈತರ ಬದಲಿಗೆ ಬೇರೆಯವರ ಖಾತೆಗೆ ಸುಮಾರು 50 ಲಕ್ಷ ಹಣ ಸಂದಾಯವಾಗಿದೆ. ಈ ಬಗ್ಗೆ ತಕ್ಷಣ ನಾವು ಸಿರವಾರ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಇದರಲ್ಲಿ ಕೃಷಿ ಅಧಿಕಾರಿಗಳ ಯಾವುದೇ ತಪ್ಪಿಲ್ಲ. ಯಾಕೆಂದರೆ ರೈತರೇ ವಿಮಾ ತುಂಬುವುದರಿಂದ ಇದರಲ್ಲಿ ಕೃಷಿ ಅಧಿಕಾರಿಗಳ ಯಾವುದೇ ಪಾತ್ರ ಇರುವುದಿಲ್ಲ. ಇದು ನಮಗೂ ಅಚ್ಚರಿ ತಂದಿದೆ. ಇದರಲ್ಲಿ ಎಡವಟ್ಟಾಗಿರುವುದು ಕಂಡು ಬಂದಿದ್ದರಿಂದ ನಾವು ದೂರು ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿಯೂ ಅವರು ಹೇಳಿದ್ದಾರೆ.
ಇದನ್ನೂ ಓದಿ : ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ದುರುಪಯೋಗ : ಧಾರವಾಡದಲ್ಲಿ 9 ಜನರ ವಿರುದ್ಧ ದೂರು
ರೈತರಿಗೆ ದೊರೆಯಬೇಕಾದ ಸವಲತ್ತುಗಳನ್ನು ಬೇರೆಯವರು ಪಡೆದುಕೊಂಡಿದ್ದಾರೆ. ವಿಮೆ ಹಣವನ್ನು ಕಬಳಿಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ, ರೈತರಿಗೆ ಸಿಗಬೇಕಾದ ಹಣ ಪಾವತಿಸಬೇಕು ಎನ್ನುವುದು ಅನ್ನದಾತರ ಒತ್ತಾಯವಾಗಿದೆ.