ರಾಯಚೂರು: ನಗರದ ಮಧ್ಯಭಾಗದಲ್ಲಿರುವ ಮಾವಿನಕೆರ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವೀರ ಸೇನಾನಿಗಳ ಪ್ರತಿಮೆಗಳು ನಿರ್ವಹಣೆ ಇಲ್ಲದೆ ವಿರೂಪಗೊಂಡಿವೆ.
ಈ ಮಾವಿನಕೆರೆ ಉದ್ಯಾವನವನ್ನು ಸುಮಾರು 15 ವರ್ಷಗಳ ಹಿಂದೆ ನಗರಸಭೆ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕೆರೆಯ ಹತ್ತಿರ ಇರುವ ಉದ್ಯಾನವು ಮಕ್ಕಳ ಮನರಂಜನೆಗೆ ಸೂಕ್ತ ಸ್ಥಳವಾಗಿದೆ. ಅಲ್ಲದೆ ಹಿರಿಯ ನಾಗರೀಕರು ಸೇರಿದಂತೆ ಸಾರ್ವಜನಿಕರಿಗೆ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಬರಲು ಸೂಕ್ತವಾಗಿದೆ.
ಇಲ್ಲಿ ಬರುವ ಮಕ್ಕಳು ಹಾಗೂ ಸಾರ್ವಜನಿಕರಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರು ಮತ್ತು ವೀರ ಸೇನಾನಿಗಳ ಇತಿಹಾಸ ಪರಿಚಯವಾಗಲಿ ಎನ್ನುವ ಉದ್ದೇಶದಿಂದ ಉದ್ಯಾನವನದ ಸುತ್ತಲೂ ವೀರ ಸೇನಾನಿಗಳಾದ ರಾಣಾ ಪ್ರತಾಪ್ ಸಿಂಗ್, ಸ್ವಾತಂತ್ರ್ಯದ ವಿವೇಕಾನಂದ, ಮೌಲಾನಾ ಅಬ್ದುಲ್ ಕಲಾಂ ಅಜಾದ್, ಶ್ರೀ ಮಹರ್ಷಿ ವಾಲ್ಮೀಕಿ, ಕಿತ್ತೂರ ರಾಣಿ ಚೆನ್ನಮ್ಮ, ಮಡಿವಾಳ ಮಾಚಿದೇವ, ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.
ಆದರೆ ಉದ್ಯಾನದ ನಿರ್ವಹಣೆಯ ಹೊಣೆ ಹೊತ್ತ ನಗರಸಭೆ ಮಾತ್ರ ಇತ್ತ ಕಡೆ ಗಮನ ಹರಿಸದ ಕಾರಣ, ಪ್ರತಿಮೆಗಳ ಬಣ್ಣ ಕಳಚಿ ವಿರೂಪಗೊಂಡಿವೆ. ಪ್ರತಿಮೆಗಳಲ್ಲಿ ಇರುವವರು ಯಾರು ಎಂದು ಗುರುತಿಸಲು ಸಾಧ್ಯವಿಲ್ಲದೆ ಅದರ ಕೆಳಗಿರುವ ನಾಮಫಲಕ ನೋಡಿ ತಿಳಿದುಕೊಳ್ಳುವ ಸ್ಥಿತಿಗೆ ತಲುಪಿವೆ. ಕೂಡಲೇ ಸ್ಥಳೀಯ ಆಡಳಿತ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವೀರ ಸೇನಾನಿಗಳ ಪ್ರತಿಮೆಗಳ ದುರಸ್ತಿಗೆ ಮುಂದಾಗಬೇಕಾಗಿದೆ.
ಈ ಬಗ್ಗೆ ಸ್ಥಳೀಯರಾದ ನರಸಪ್ಪ ಮಡಿವಾಳ ಹಾಗೂ ರಾಮಣ್ಣ ಪ್ರತಿಕ್ರಿಯಿಸಿ, ವೀರ ಸೇನಾನಿಗಳ ಪ್ರತಿಮೆಗಳು ಇಲ್ಲಿಯವರೆಗೂ ಯಾವುದೇ ರೀತಿಯ ನಿರ್ವಹಣೆ ಇಲ್ಲದೇ ಅಧಿಕಾರಿಗಳು ಮತ್ತು ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಕೂಡಲೇ ಜಿಲ್ಲಾಡಳಿತ ಅಥವಾ ನಗರಸಭೆಯವರು ಗಮನಹರಿಸಿ ದುರಸ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ರು.