ಲಿಂಗಸುಗೂರು: ರೈತರು, ಗೋದಾಮು ಮಾಲೀಕರು ಕರ್ಣಾಟಕ ಬ್ಯಾಂಕ್ಗೆ ಮರು ಪಾವತಿಸಬೇಕಾದ 1,65,88,129 ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ಕರ್ಣಾಟಕ ಬ್ಯಾಂಕ್ ಶಾಖೆಯು ಮುಂಬೈನ ಸಿಎನ್ಎಕ್ಸ್ ಕಾರ್ಪೊರೇಷನ್ ಒಡಂಬಡಿಕೆ ಆಧಾರದ ಮೇಲೆ ಸಂಸ್ಥೆ ನೀಡುವ ರಸೀದಿ ಆಧರಿಸಿ ರೈತರ ಉತ್ಪನ್ನಗಳ ಮೇಲೆ ಸಾಲ ಸೌಲಭ್ಯ ನೀಡಲಾಗಿತ್ತು. 2017ರಲ್ಲಿ ಈ ಬ್ಯಾಂಕ್ನಿಂದ ಕೊಪ್ಪಳ ಜಿಲ್ಲೆಯ ಕಾರಟಗಿಯ ವೆಂಕಟೇಶ್ವರರಾವ್ 35 ಲಕ್ಷ ರೂ., ಶ್ರೀರಾಮನಗರದ ರಾಮಮೋಹನರಾವ್ 49 ಲಕ್ಷ ರೂ.ಗಳನ್ನು ಲಿಂಗಸುಗೂರು ಎಪಿಎಂಸಿ ದಂಡಮುಡಿ ಶ್ರೀನಿವಾಸ ಗೋದಾಮಿನಲ್ಲಿ 4,900 ಭತ್ತದ ಚೀಲಗಳಿವೆ ಎಂದು ದಾಖಲೆ ನೀಡಿ ಸಾಲ ಪಡೆದಿದ್ದರು.
ಹಾಗೆಯೇ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದ ಭೀಮಪ್ಪ ಶರಣಬಸವ ಅಂಗಡಿ ಗೋದಾಮಿನಲ್ಲಿ 3,500 ಭತ್ತದ ಚೀಲ ಇರುವುದಾಗಿ 32.90 ಲಕ್ಷ ರೂ. ಹಾಗೂ ಆನೆಹೊಸೂರಿನ ರಾಮಲಿಂಗಪ್ಪ ಬಸಮ್ಮ ಎಂಬುವರು ಗೋದಾಮಿನಲ್ಲಿ 2,500 ಭತ್ತದ ಚೀಲ ಇದೆಯೆಂದು 24 ರೂ. ಲಕ್ಷ ಸಾಲ ಪಡೆದಿದ್ದರು. ಒಟ್ಟಾರೆ 1,65,88,129 ರೂ. ಸಾಲ ಪಡೆಯಲಾಗಿತ್ತು.
ಆದರೆ ಸಾಲ ನೀಡಲು ರಸೀದಿ ನೀಡಿದ ಸಂಸ್ಥೆ, ಸಾಲ ಪಡೆದ ರೈತರು ಹಾಗೂ ಗೋದಾಮು ಮಾಲೀಕರು ಸೇರಿಕೊಂಡು ಗೋದಾಮಿನಲ್ಲಿ ಇದ್ದ ಭತ್ತದ ಚೀಲಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡದೆ, ಸಾಲ ಮರುಪಾವತಿಸದೆ ಬೇರೆ ಕಡೆಗೆ ಸಾಗಣೆ ಮಾಡಿ ಮಾರಾಟ ಮಾಡಿದ್ದಾರೆ. ಈ ಮೂಲಕ ವಂಚನೆ ಮಾಡಿದ್ದಾರೆ ಎಂದು ಬ್ಯಾಂಕ್ ವ್ಯವಸ್ಥಾಪಕ ಬಾಲಸುಬ್ರಮಣ್ಯ ಅವರು ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿಎಸ್ಐ ಪ್ರಕಾಶ ಡಂಬಳ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.