ರಾಯಚೂರು: ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದಿಖಿ (87) ಸೋಮವಾರ ರಾತ್ರಿ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಬಹುದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಇವರು ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಾಯಚೂರಿಗೆ ವಾಪಸ್ ಬಂದಿದ್ದರು.
ಅಬ್ದುಲ್ ಸಮದ್ ಸಿದ್ದಿಖಿಯವರು ರಾಯಚೂರು ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡವರ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅದರಲ್ಲಿ ನ್ಯೂ ಎಜುಕೇಶನ್ ಸೊಸೈಟಿ(ರಿ) ಅಡಿಯಲ್ಲಿ ವಿಶೇಷವಾಗಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಿದ್ದರು. ರಾಯಚೂರಿನಲ್ಲಿ ಸಫೀಯಾ ಸಂಸ್ಥೆ ಸ್ಥಾಪಿಸಿ ಮಹಿಳೆಯರಿಗೆ ಡಿ.ಎಡ್. ಕಾಲೇಜು ಸ್ಥಾಪಿಸಿದ್ದರು.
ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕರಾದ ಸೈಯದ ಮೂಸಾ ಅವರ ಮೊಮ್ಮಗರಾದ ಅಬ್ದುಲ್ ಸಮಸದ್ ಸಿದ್ದಿಖಿ ಅವರು ರಾಯಚೂರು ನಗರಸಭೆಯ ಸದಸ್ಯರಾಗಿ ಮೊದಲು ಆಯ್ಕೆಯಾಗಿದ್ದರು. ನಂತರ ಜನತಾದಳದಿಂದ 1988ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 1994ರ ವರೆಗೆ ಕಾರ್ಯನಿರ್ವಹಿಸಿದ್ದರು.
ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರು ಮತ್ತು ಮೊಮ್ಮಕ್ಕಳನ್ನು ಮೃತರು ಅಗಲಿದ್ದಾರೆ. ರಾಯಚೂರಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂಓದಿ: ಅನಸ್ತೇಷಿಯಾ ನೀಡದೇ ಐವಿ ಸೆಡೇಷನ್ ಟೆಕ್ನಿಕ್ ಮೂಲಕ ಕ್ಲಿಷ್ಟಕರ ಕಿಡ್ನಿ ಕಲ್ಲು ಶಸ್ತ್ರಚಿಕಿತ್ಸೆ