ರಾಯಚೂರು: ಇಡೀ ದೇಶ ಇಂದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಆದರೆ, ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಎಲ್ಲರಂತೆ ಕುಟುಂಬ ಸಸದಸ್ಯರೊಂದಿಗೆ ಹಬ್ಬದ ಸಂಭ್ರಮ ಆಚರಿಸಬಹುದಿತ್ತು. ಆದರೆ, ಪ್ರವಾಹ ಉಂಟಾಗಿ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಜನರ ಬದುಕು ಕತ್ತಲಲ್ಲಿ ಮರೆಯಾಗಿದೆ. ಆ ಸಂತ್ರಸ್ತರಿಗಾಗಿ ಸಿಬ್ಬಂದಿ ವರ್ಗ ರಜೆಯಲ್ಲೂ ಹಾಜರಾಗಿ ಕರ್ತವ್ಯ ಮೆರೆದಿದ್ದಾರೆ.
ಸಂತ್ರಸ್ತರ ನೆರವಿಗೆ ಬರುವ ಉದ್ದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪೀಡಿತ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೀಪಾವಳಿ ಸಂದರ್ಭದಲ್ಲಿ ಯಾವೊಬ್ಬ ಅಧಿಕಾರಿಯೂ ರಜೆ ಹಾಕಬಾರದು. ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದ್ದರು.
ಮುಖ್ಯಮಂತ್ರಿ ಆದೇಶದ ಪ್ರಕಾರ ಜಿಲ್ಲಾಧಿಕಾರಿ, ಉಪ ವಿಭಾಗ ವ್ಯಾಪ್ತಿಯ ರಾಯಚೂರು, ಮಾನ್ವಿ, ದೇವದುರ್ಗ ತಾಲೂಕಿನ ಅಧಿಕಾರಿಗಳಿಗೆ ರಜೆ ರದ್ದುಪಡಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಪರಿಣಾಮ ನಾಲ್ಕನೇ ಶನಿವಾರವೂ ಕಾರ್ಯ ನಿರ್ವಹಿಸಿದ್ದರು.
ನಾರಾಯಣಪುರ ಜಲಾಶಯದಿಂದ ಜಿಲ್ಲೆಯ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿತ್ತು. ಈ ಪ್ರವಾಹಕ್ಕೆ ಸಾವಿರಾರು ಜನ ಬೀದಿಗೆ ಬಂದರು. ಅಲ್ಲದೆ, ಈ ನೆರೆ ಹಬ್ಬದ ಸಂಭ್ರಮವನ್ನೂ ಕಸಿದುಕೊಂಡಿದೆ.