ರಾಯಚೂರು: ಜಿಲ್ಲೆಯ ರೈತರಿಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆರಾಯ ಆಟ ಸಾಕಾಗಿದೆ. ಒಂದು ಕಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿ ನಡುವೆ ರೈತ ಹೈರಾಣಾಗಿದ್ದಾನೆ.
ಜಿಲ್ಲೆಯ ಎಡಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಕಲ್ಲು, ಬಂಡೆಗಳ ಮಧ್ಯೆ ಅಲ್ಲಲ್ಲಿ ನೀರು ನಿಂತಿರುವುದು ಹೊರತು ಪಡಿಸಿದ್ರೆ, ನೀರೆ ಇಲ್ಲದಂತಾಗಿದೆ. ತುಂಗಭದ್ರಾ ನದಿಯ ನೀರಿನಿಂದ ಸಿಂಧನೂರು, ಮಸ್ಕಿ, ಮಾನ್ವಿ ಹಾಗೂ ರಾಯಚೂರು ಜಿಲ್ಲೆಯ ರೈತರು ಭತ್ತ ಬೆಳೆಯುತ್ತಾರೆ. ಆದರೆ ಇದೀಗ ತುಂಗಭದ್ರಾ ಜಲಾಶಯಕ್ಕೆ ಮಳೆಯ ಕೊರತೆಯಿಂದ ಜಲಾಶಯ ಭರ್ತಿಯಾಗಿಲ್ಲ. ಹೀಗಾಗಿ ಜಲಾಶಯದ ಎಡದಂಡೆ ಕಾಲುವೆಗಳಿಗೆ ನೀರು ಹರಿದು ಬಂದಿಲ್ಲ. ಇದರಿಂದಾಗಿ ಹಚ್ಚ ಹಸಿರಿನಿಂದ ಕಂಗೊಳಿಸಬೇಕಾದ ಹೊಲ ಗದ್ದೆಗಳು ಭಣಗುಡುತ್ತಿವೆ. ಕೆಲ ರೈತರು ನೀರು ಬಿಡಬಹುದೆಂಬ ನಿರೀಕ್ಷೆಯಲ್ಲಿ ಗದ್ದೆಗಳಲ್ಲಿ ಭತ್ತದ ಸಸಿಯನ್ನಿಟ್ಟು ನೀರಿಗಾಗಿ ಕಾದು ಕುಳಿತಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಸದ್ಯ ಕಾಲುವೆ ಮುಖೇನ ಕುಡಿಯುವ ನೀರಿನ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಬೇಸಿಗೆ ಬೆಳೆಗಾದರೂ ನೀರು ಬಿಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.