ರಾಯಚೂರು : ರಾಜ್ಯದಲ್ಲಿ ಆವರಿಸಿರುವ ಬರಗಾಲದಿಂದ ನೀರಿನ ಅಭಾವ ಸೃಷ್ಟಿಯಾಗಿದೆ. ನದಿಗಳು ನೀರಿಲ್ಲದೇ ಬಣ ಬಣ ಎನ್ನುತ್ತಿದ್ದರೆ ಜಲಾಶಯಗಳು ಖಾಲಿಯಾಗಿವೆ. ಪರಿಣಾಮ ರೈತರು ಕಂಗಾಲಾಗಿದ್ದಾರೆ. ನಾಲೆ ನೀರು ನಂಬಿ ಬೆಳೆದ ಬೆಳೆ ಒಣಗುತ್ತಿರುವುದರಿಂದ ಅಳಿದು ಉಳಿದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ.
ಹೌದು, ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ತೀವ್ರವಾಗಿ ಬರಗಾಲ ಆವರಿಸಿದೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆ ಒಣಗಿ ಹೋಗುತ್ತಿದ್ದರೆ, ಇತ್ತ ತುಂಗಭದ್ರಾ ಎಡದಂಡೆಯ ಕಾಲುವೆ ನೀರನ್ನು ನಂಬಿಕೊಂಡು ವ್ಯವಸಾಯ ಮಾಡಿಕೊಳ್ಳುತ್ತಿರುವ ರೈತರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದ ಮೆಣಸಿನಕಾಯಿ ಬೆಳೆಗೆ ಹಾನಿಯಾಗುತ್ತಿರುವುದರಿಂದ ಟ್ಯಾಂಕರ್ ಮೊರೆ ಹೋಗಿ, ಬೆಳೆ ಉಳಿಸಿಕೊಳ್ಳುವ ಸಹಾಸಕ್ಕೆ ಮುಂದಾಗಿದ್ದಾರೆ.
ರಾಯಚೂರು ತಾಲೂಕಿನ ಆಶಾಪುರ ಗ್ರಾಮದ ರೈತ ವೀರೇಶ ಎಂಬುವರು ಮೆಣಸಿನಕಾಯಿ ಬೆಳೆಯನ್ನು ಉಳಿಸಿಕೊಳ್ಳಲು ಮಲಿಯಬಾದ್ ಬಳಿಯ ಕೆರೆಯಿಂದ ಟ್ಯಾಂಕರ್ ಮೂಲಕ ನೀರನ್ನು ತಂದು ಬೆಳೆಗೆ ಹಾಯಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ಒಂದೂವರೆ ಎಕರೆಯಲ್ಲಿ ಮೆಣಸಿನಕಾಯಿ ಬೆಳೆ ಹಾಕಿದ್ದಾನೆ. ಇದರ ಇಳುವರಿ ಕೂಡ ಉತ್ತಮವಾಗಿ ಬಂದಿದೆ. ಪಕ್ಕದಲ್ಲಿಯೇ ತುಂಗಭದ್ರಾ ಎಡದಂಡೆ ಕಾಲುವೆ ಹಾದು ಹೋಗಿದ್ದು, ಆದರೆ ನೀರಿಲ್ಲ. ಹೀಗಾಗಿ, ಟ್ಯಾಂಕರ್ ಮೂಲಕ ನೀರು ತಂದು ಬೆಳೆ ಉಳಿಸಿಕೊಳ್ಳುತ್ತಿದ್ದಾನೆ" ಎಂದರು.
ಈಗಾಗಲೇ ಸಾವಿರಾರು ರೂಪಾಯಿ ವ್ಯಯ ಮಾಡಿ ಬೆಳೆ ಬೆಳೆಯಲಾಗಿದೆ. ಒಂದು ಟ್ಯಾಂಕರ್ ನೀರಿಗೆ 4 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಉಳಿಸಿಕೊಳ್ಳುತ್ತಿದ್ದೇನೆ. ನಮ್ಮ ಅಕ್ಕಪಕ್ಕದ ರೈತರು ಸಹ ಟ್ಯಾಂಕರ್ ಮೂಲಕ ಇದೆ ಕ್ರಮವನ್ನು ಅನುಸರಿಸಲು ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಕೃಷಿ ಕಾಯಕ ನಂಬಿಕೊಂಡು ಜೀವನ ಮಾಡುವ ಅನ್ನದಾತರಿಗೆ ಬರಗಾಲದಿಂದ ಬರಸಿಡಿಲು ಬಡಿದಂತಾಗಿದೆ. ಇದೀಗ ರೈತರು ಮತ್ತಷ್ಟು ಹಣ ಖರ್ಚು ಮಾಡಿ ಬೆಳೆ ರಕ್ಷಣೆಗೆ ಮುಂದಾಗಿದ್ದು, ರೈತರ ಈ ಪ್ರಯತ್ನ ಯಶಸ್ವಿಯಾಗಲಿ.
ಇದನ್ನೂ ಓದಿ : ಕೊಪ್ಪಳದಲ್ಲಿ 'ಬರ' ಸಿಡಿಲು : ಬೆಳೆ ಸಂರಕ್ಷಣೆಗೆ ಟ್ಯಾಂಕರ್ ನೀರಿನ ಮೊರೆ ಹೋದ ರೈತರು
ಇನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ, ಯರೇಹಂಚಿನಾಳ, ಸೊಂಪುರ ಸೇರಿದಂತೆ ವಿವಿಧ ಗ್ರಾಮದಲ್ಲಿ ರೈತರು ಸಹ ಬೆಳೆ ಸಂರಕ್ಷಿಸಲು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರುಣಿಸುವುದು ಸರಳ ಕೆಲಸವಲ್ಲ. ಹೀಗಿದ್ದರೂ ಇರುವ ಒಂದಿಷ್ಟು ಬೆಳೆ ಉಳಿಸಿಕೊಳ್ಳೋಣ ಎಂದು ಪಕ್ಕದ ಗ್ರಾಮಗಳ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ನೀರು ಹಾಯಿಸುತ್ತಿದ್ದಾರೆ. ಬರದ ಹಿನ್ನೆಲೆಯಲ್ಲಿ ಏನೇ ಬೆಳೆದರೂ ಬೆಲೆ ಸಿಗುತ್ತದೆ ಎನ್ನುವ ಆತ್ಮವಿಶ್ವಾಸದೊಂದಿಗೆ ಸದ್ಯಕ್ಕೆ ಉಳಿದಿರುವ ಈರುಳ್ಳಿ, ಮೆಣಸಿನಕಾಯಿಗೆ ನೀರುಣಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ : ಮೂರು ತಾಲೂಕುಗಳು ಬರಪೀಡಿತ ಪಟ್ಟಿಯಿಂದ ಹೊರಗೆ.. ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ನೇತೃತ್ವದಲ್ಲಿ ಪ್ರತಿಭಟನೆ