ರಾಯಚೂರು: ಅತಿವೃಷ್ಟಿ ಮತ್ತು ಅನಾವೃಷ್ಟಿ ನಿರ್ವಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ರೈತರಿಗೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿವೆ. ಸರ್ಕಾರಗಳು ದಿವಾಳಿಗಾಯಗಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಭಿಕ್ಷಾಟನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.
ನಗರದ ತೀನ್ ಖಂದಿಲ್ ವೃತ್ತದಲ್ಲಿ ರೈತ ಸಂಘದ ನೇತ್ರತ್ವದಲ್ಲಿ ರೈತರು ಪ್ರತಿ ಅಂಗಡಿಗಳಿಗೆ ತೆರಳಿ ಭಿಕ್ಷಾಟನೆ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಸಾವಿರಾರು ಎಕರೆ ಬೆಳೆ ಸಂಪೂರ್ಣ ಹಾನಿಯಾಗಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳಾದ ಫಸಲ್ ಭೀಮಾ ಯೋಜನೆ, ಕೃಷಿ ಸಮ್ಮಾನ್ ಯೋಜನೆ ಸೇರಿದಂತೆ ಇತರ ಯೋಜನೆಗಳಲ್ಲಿ ರೈತರಿಗೆ ಬರಬೇಕಾಗಿರುವ ಬಾಕಿ ಹಣ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಮಾತನಾಡಿ, ಮಂಗಾರು ಮಳೆ ಹೆಚ್ಚಾಗಿ ಸುರಿದ ಪರಿಣಾಮ ರೈತರು ಬೆಳೆದ ಎಲ್ಲಾ ಬೆಳೆಗಳು ಹಾನಿಗೊಳಗಾಗಿವೆ. ರೈತರಿಗೆ ಪರಿಹಾರ ನೀಡಲು ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್ಥಿಕವಾಗಿ ದಿವಾಳಿಯಾಗಿವೆ ಎಂದು ಭಾವಿಸಿ ಇಂದು ಭಿಕ್ಷಾಟನೆ ನಡೆಸಲಾಗುತ್ತಿದ್ದು, ಭಿಕ್ಷಾಟನೆಯಿಂದ ಬಂದ ಹಣವನ್ನು ಪ್ರಧಾನಮಂತ್ರಿ ಕಲ್ಯಾಣ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಗುವುದು ಎಂದರು.