ರಾಯಚೂರು: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ಎಸಗಿರುವ ಕೇಂದ್ರ ಸರ್ಕಾರ ರೈತರಲ್ಲಿ ಕ್ಷಮೆಯಾಚಿಸಬೇಕು, ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಮನ್ವಯ ಸಮಿತಿ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲಿನ ದೌರ್ಜನ್ಯಕ್ಕೆ ಪ್ರಧಾನ ಮಂತ್ರಿಗಳು ಕ್ಷಮೆಯಾಚಿಸಬೇಕು, ಯಾವುದೇ ಷರತ್ತುಗಳನ್ನು ಒಡ್ಡದೇ ಕಾರ್ಪೋರೆಟ್ ಕಂಪನಿಗಳಿಗೆ ಕೃಷಿಯನ್ನು ವಹಿಕೊಡಲಿರುವ ಕೃಷಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ,ವಿದ್ಯುತ್ ತಿದ್ದುಪಡಿ ಕಾಯ್ದೆ, ಕಾರ್ಮಿಕ ವಿರೋಧಿ ಸಂಹಿತೆಗಳು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಿ ಕೃಷಿ ಉತ್ಪನ್ನಗಳ ಬೆಲೆ ಶೇ. 50 ಹೆಚ್ಚಿಸಬೇಕು, ರೈತರ ಎಲ್ಲಾ ರೀತಿಯ ಸಾಲಮನ್ನಾ ಮಾಡಬೇಕು, ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ₹ 7,500 ಮಾಸಿಕ ವೇತನ ನೀಡಬೇಕು. ತಲಾ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯ ನೀಡಬೇಕು, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 200 ದಿನ ಕೂಲಿ ನೀಡಬೇಕು, ಕೂಲಿ ₹700 ಗೆ ಹೆಚ್ಚಿಸಬೇಕು ಸೇರಿದಂತೆ ಇತರೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.