ರಾಯಚೂರು: ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಇಂದು ಕರೆ ನೀಡಿದ್ದ ಸಿಂಧನೂರು ನಗರ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾಂಗ್ರೆಸ್ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಆದ್ರೆ ಕೆಲವು ಅಂಗಡಿ-ಮುಗ್ಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಬೆಳಗ್ಗೆ 10:30ರ ನಂತರ ಕೆಲಕಾಲ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಬಂದ್ಗೆ ರೈತರು, ನಾನಾ ಸಂಘಟನೆಗಳ ಕಾರ್ಯಕರ್ತರು ಬೆಂಬಲಿಸುವ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.
ತುಂಗಭದ್ರಾ ಜಲಾಶಯದಿಂದ ನೀರು ಲಭ್ಯವಿರುವುದರಿಂದ ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಗೆ ಬರುವ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಏಪ್ರಿಲ್ ತಿಂಗಳವರೆಗೆ ನೀರು ಹರಿಸುವ ನಿರೀಕ್ಷೆಯಿತ್ತು. ಆದ್ರೆ ಮುನಿರಾಬಾದ್ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಮಾರ್ಚ್ 31ರವರೆಗೆ ಮಾತ್ರ ನೀರು ಹರಿಸುವುದಾಗಿ ತೀರ್ಮಾನಿಸಿ ನಿರ್ಧಾರ ಪ್ರಕಟಿಸಲಾಯಿತು. ಆದ್ರೆ ಇದಕ್ಕೆ ಸಹಮತ ವ್ಯಕ್ತಪಡಿಸದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಇತರೆ ಮುಖಂಡರು ಏ. 15ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಇಂದು ಹೋರಾಟ ನಡೆಸಿದ್ರು.