ರಾಯಚೂರು: ಜಿಲ್ಲೆಯ ಹಲವು ತಾಲೂಕುಗಳಲ್ಲಿನ ಸರ್ಕಾರಿ ಅರಣ್ಯಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ, ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ, ರೈತ ಸಂಘ( ಎಐಕೆಕೆಎಸ್) ವತಿಯಿಂದ ನಗರದಲ್ಲಿ ಇಂದಿನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಅಹೋರಾತ್ರಿ ಕುಳಿತ ಮುಖಂಡರು, ಜಿಲ್ಲೆಯ ಹಲವು ತಾಲೂಕುಗಳಲ್ಲಿ 30ರಿಂದ 40 ವರ್ಷಗಳಿಂದ ಸರ್ಕಾರಿ ಹೆಚ್ಚುವರಿ ಅರಣ್ಯಭೂಮಿಯನ್ನು ಸಾವಿರಾರು ರೈತರು ಸಾಗುವಳಿ ಮಾಡುತ್ತಾ ಬಂದಿದ್ದು, ಇವರಿಗೆ ಭೂ ಮಂಜೂರಾತಿ ನೀಡಿಲ್ಲ. 1991, 95ರಲ್ಲಿ ಅರ್ಜಿ ಸಲ್ಲಿಸಿದ ಸಾವಿರಾರು ಕುಟುಂಬಗಳಿಗೆ ಭೂಮಂಜೂರಾತಿ ಸಿಗದೆ ಬಡ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಲಿಂಗಸುಗೂರು ತಾಲೂಕಿನ ಗುಂತಗೋಳ, ಐದಬಾವಿ, ಯರಡೋಣಾ ಗ್ರಾಮದಲ್ಲಿ ನೂರಾರು ಕುಟುಂಬಗಳು ಸಾಗುವಳಿ ಮಾಡುತ್ತಿದ್ದರೂ, ಸರ್ವೆ ನಂ.69,72 ಮತ್ತು 94 ರ ಅರಣ್ಯ ಭೂಮಿಯಲ್ಲಿ 40 ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಪರಿಶಿಷ್ಟ ಪಂಗಡದ ಈ ಕುಟುಂಬಗಳಿಗೆ 2006 ರ ಅರಣ್ಯ ಕಾಯ್ದೆ ಪ್ರಕಾರ ಭೂ ಮಂಜೂರಾತಿ ನೀಡಬೇಕಿದ್ದರೂ ಈವರೆಗೆ ನೀಡಿಲ್ಲ. ಆದ್ದರಿಂದ ಕೂಡಲೇ ಸದರಿ ಗ್ರಾಮಗಳ ಬಡ ರೈತರಿಗೆ ಭೂ ಮಂಜುರಾತಿ ನೀಡಬೇಕು. ಈ ಗ್ರಾಮಗಳ ಜನರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು ಹಾಗೂ 13-3-2005ರ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಬಡ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.