ರಾಯಚೂರು: ನಾಳೆ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 30,413 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಹೆಚ್.ಗೋನಾಳ ತಿಳಿಸಿದ್ದಾರೆ.
ಇದಕ್ಕಾಗಿ ಜಿಲ್ಲೆಯಾದ್ಯಂತೆ ಒಟ್ಟು 77 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹೆಚ್ಚುವರಿ 9 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 1,483 ಕೊಠಡಿಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಪರೀಕ್ಷೆ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಅಂಗವಾಗಿ ಥರ್ಮಲ್ ಸ್ಕ್ಯಾನ್ ಕೂಡ ಮಾಡಲಾಗುವುದು ಎಂದರು.
ಈಗಾಗಲೇ ಜಿಲ್ಲೆಯಾದ್ಯಂತ ಎಲ್ಲ ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವ ಮೂಲಕ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದಿದ್ದಾರೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸಹ ಉಚಿತ ಮಾಸ್ಕ್ ನೀಡಲಾಗುವುದು, ಇನ್ನೂ ನಾಳೆ ಪರೀಕ್ಷೆ ನಡೆಯುವ ಹಿನ್ನೆಲೆ ಪೂರ್ವಭಾವಿಯಾಗಿ ಇಂದು ಯರಮರಸ್ನ ಆದರ್ಶ ವಿದ್ಯಾಲಯದಲ್ಲಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತೋರಿಸಲಾಯಿತು.
ಪೊಷಕರು ಧೈರ್ಯದಿಂದ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಬೇಕು. ಅವರ ಆರೋಗ್ಯ ದೃಷ್ಠಿಯಿಂದ ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.