ರಾಯಚೂರು: ಚುನಾವಣೆ ಸಮಯದಲ್ಲಿ ಬಜೆಟ್ ಮಂಡನೆಯಾಗಿದೆ, ಕರ್ನಾಟಕದ ಬಜೆಟ್ ಮಂಡನೆಗೆ ಬಹಳ ಪಾವಿತ್ರತೆ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಕಿವಿಯಲ್ಲಿ ಚೆಂಡು ಹೂ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.
ಆಡಳಿತ ಪಕ್ಷದಲ್ಲಿದ್ದಾಗ ಐದು ವರ್ಷ ಆಡಳಿತ ಮಾಡಿ ಮತ್ತೆ ಚುನಾವಣೆಯಲ್ಲಿ ಸೋತಿದ್ದೀರಿ. ಒಳ್ಳೆಯ ಕೆಲಸ ಮಾಡಿದ್ದರೆ ಜನ ನಿಮ್ಮನ್ನು ತಿರಸ್ಕಾರ ಮಾಡುತ್ತಾ ಇರಲಿಲ್ಲ. ಚೆಂಡು ಹೂ ಇಟ್ಟುಕೊಂಡು ಕಾಂಗ್ರೆಸ್ ಪ್ರಚಾರ ಪಡೆದಿದೆ. ಮುಂಬರುವ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಐಪಿಎಸ್ ಅಧಿಕಾರಿ ಡಿ.ರೂಪ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಐಎಎಸ್ ಅಧಿಕಾರಿಗಳು ನೇರವಾಗಿ ವೈಯಕ್ತಿಕ ದ್ವೇಷಕ್ಕೆ ಪತ್ರಿಕಾಗೋಷ್ಠಿ ಮಾಡುವುದು ಸರಿಯಲ್ಲ. ಅಲ್ಲದೇ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದೂ ಸರಿಯಲ್ಲ. ಈ ಕುರಿತು ಕ್ರಮ ಕೈಗೊಳ್ಳಲು ಸಿಎಂ ಜೊತೆ ಮಾತನಾಡುತ್ತೇನೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದರು.
ಸುರ್ಜೇವಾಲಾ ಅವರ ಹೇಳಿಕೆ ಈಶ್ವರಪ್ಪ ತಿರುಗೇಟು: ಸುರ್ಜೇವಾಲಾ ಬೆಳಗಾವಿಯಲ್ಲಿ ಬಿಜೆಪಿ ಅವರು ರಾಕ್ಷಸರು ಎಂದು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ರಾಕ್ಷಸರನ್ನು ಜನ ಹೊರಹಾಕ್ತಿದ್ದಾರೆ, ದೈವ ಭಕ್ತರನ್ನು ಆಡಳಿತಕ್ಕೆ ತರ್ತಿದ್ದಾರೆ. ಸುರ್ಜೆವಾಲಾ ಒಬ್ಬ ರಾಷ್ಟ್ರೀಯ ನಾಯಕರು ಅವರಿಗೆ ಇದು ಶೋಭೆತರಲ್ಲ. ದಲಿತರು, ಹಿಂದುಳಿದವರು ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ. ಚುನಾವಣೆಗೆ ಕರ್ನಾಟಕದಲ್ಲಿ ಎಲ್ಲೇ ನಿಂತರೂ ಸಿದ್ದರಾಮಯ್ಯ ಸೋಲುತ್ತಾರೆ.
ಪರಮೇಶ್ವರ ಕಾದು ಕೂತಿದ್ದಾರೆ ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಶ್ರೀನಿವಾಸ್ ಪ್ರಸಾದ್ ಇನ್ನಿತರ ನಾಯಕರೇ ಇವರನ್ನು ಸೋಲಿಸುತ್ತಾರೆ. ಸಿದ್ದರಾಮಯ್ಯ ಒಬ್ಬ ಮಿಮಿಕ್ರಿ ಕಲಾವಿದ. ಅವರೇ ವಿಶ್ವ ನಾಯಕ ಮೋದಿ ಅವರಿಗೆ ನರ ಹಂತಕ ಅಂತೀರಲ್ಲಾ?. ನಿಮಗೆ ನಾನು ಏನಂತಾ ಕರಿಬೇಕು?, ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತಾನಾಡುತ್ತಾರೆ, ಕನಿಷ್ಠ ಪಕ್ಷ ಒಂದು ಕ್ಷಮೆ ಕೇಳಿದ್ದಾರಾ ಸಿದ್ದರಾಮಯ್ಯ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಟೀಕೆಗೆ ಕೆಎಸ್ಈ ಟಾಂಗ್: ನನ್ನನ್ನು ಕಂಡರೆ ಬಿಜೆಪಿ ನಾಯಕರಿಗೆ ಭಯ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ, ರಸ್ತೆಯಲ್ಲಿ ಕಾರು ಬಂದರೆ ನಾಯಿ ಬೊವ್ ಬೊವ್ ಅಂತ ಬೊಗಳುತ್ತೆ. ನಾನು ಸಿದ್ದರಾಮಯ್ಯ ಅವರನ್ನು ನಾಯಿ ಅಂತ ಕರೆತಿಲ್ಲ. ಭಯದ ವಿಚಾರಕ್ಕೆ ಉದಾಹರಣೆ ನೀಡಿದ್ದೇನೆ ಎಂದ ಅವರು ನರೇಂದ್ರ ಮೋದಿ ಆನೆಯಿದ್ದ ಹಾಗೆ, ಆನೆ ಹೋಗುವಾಗ ನಾಯಿಗಳು ಬೋಗಳುತ್ತವೆ. ಸಿದ್ದರಾಮಯ್ಯ ನಾಯಿ ಅಂತ ನಾನು ಹೇಳಲ್ಲ ಅಂತ ಕೀಳು ಮಟ್ಟಕ್ಕೆ ನಾನು ಹೋಗುವುದಿಲ್ಲ ಲೇವಡಿ ಮಾಡಿದರು.
ಹಾಗೆ ನಳಿನ್ ಕುಮಾರ್ ಕಟೀಲ್ ಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆಗೆ, ಭಾರತ ಈ ಹಿಂದೆ ಭಿಕ್ಷುಕರ, ಸಾಲಗಾರರ ರಾಷ್ಟ್ರವಾಗಿತ್ತು ಈಗ ಇಲ್ಲ, ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಆರ್ಥಿಕವಾಗಿ ಸದೃಢವಾಗಿದೆ. ಕಟೀಲ್ ಹೇಳಿಕೆಯಲ್ಲಿ ಗೊಂದಲ ಬೇಡ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಸೋಲಬೇಕು ಅಂತಾ ಖುದ್ದು ಕಾಂಗ್ರೆಸ್ ನ ನಾಯಕರಿಗೆ ಆಸೆ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತು ನೋಡಲಿ, ಅವರ ಪಕ್ಷದವರೇ ಇವರನ್ನು ಸೋಲಿಸುತ್ತಾರೆ. ಯಾರಿಗೆ ಅವಕಾಶ ಸಿಗುತ್ತೆ ಅವರು ಸಚಿವರು ಆಗುತ್ತಾರೆ, ನಾನು ಸಚಿವ ಸ್ಥಾನಕ್ಕಾಗಿ ಯಾರಿಗೂ ಕಿರಿಕಿರಿ ಮಾಡಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ವಿಷಯದಲ್ಲಿ ಅಶ್ವತ್ಥ ನಾರಾಯಣ್ ಹೇಳಿಕೆಯನ್ನು ನಾನು ಸಮರ್ಥನೆ ಮಾಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಕೊಲೆ ಮಾಡುವಂತ ಹೇಳಿಕೆ ಸರಿಯಲ್ಲ. ಆದರೆ ಅಶ್ವತ್ಥ ನಾರಾಯಣ ಕ್ಷಮೆ ಕೇಳಿದ್ದಾರೆ. ನೀವು ಮೋದಿಗೆ ನರಹಂತಕ ಅಂತ ಕರಿತಿರಲ್ಲಾ ಸಿದ್ದರಾಮಯ್ಯ, ಪ್ರಧಾನಿಯನ್ನು ಏಕ ವಚನದಲ್ಲಿ ಕರಿತೀರಿ, ನೀವು ಕ್ಷಮೆ ಕೇಳಬೇಕು ಎಂದು ಇದೇ ವೇಳೆ ಈಶ್ವರಪ್ಪ ಆಗ್ರಹಿಸಿದರು.
ಇದನ್ನೂ ಓದಿ; ಕೆಲ ರಾಜಕಾರಣಿಗಳಿಗೆ ಬ್ರಾಹ್ಮಣ ಸಮುದಾಯದ ಕುರಿತು ದೃಷ್ಟಿದೋಷವಿದೆ, ತಪಾಸಣೆ ಅಗತ್ಯ: ಎಸ್ ಸುರೇಶ್ ಕುಮಾರ್