ರಾಯಚೂರು: ನಗರದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕೆಂದು ಎಸ್ಎಫ್ಐ, ಜೆಎಂಎಸ್ ತಾಲೂಕು ಸಮಿತಿ ಒತ್ತಾಯಿಸಿವೆ.
ನಗರದ ಮಾಣಿಕಪ್ರಭು ಬೆಟ್ಟದ ಉಸುಕಿನ ಹನುಮಪ್ಪ ದೇವಸ್ಥಾನದ ಬಳಿಯ ಹೊಲದಲ್ಲಿ ಸುಟ್ಟು ಕರಕಲಾದ, ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಆದ್ರೆ ವಿದ್ಯಾರ್ಥಿ ಪಾಲಕರು ಅದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಕರಣದ ಸೂಕ್ತ ತನಿಖೆಗೆ ಆದೇಶಿಸುವಂತೆ ಸಂಘದ ಪದಾಧಿಕಾರಿಗಳು, ಜಿಲ್ಲಾ ಸ್ಥಾನಿಕ ಅಧಿಕಾರಿಗಳು, ಡಿಸಿ ಮನವಿ ಸಲ್ಲಿಸಿದರು.
ಡೆತ್ನೋಟ್ ಪ್ರಕಾರ ಪರೀಕ್ಷೆಯಲ್ಲಿ ನಿರೀಕ್ಷಿತ ಪ್ರಮಾಣದ ಅಂಕಗಳು ಬಾರದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ ಪ್ರೇಮ ಪ್ರಕರಣದ ಕಾರಣದಿಂದ ಕೊಲೆ ಮಾಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಈ ವೇಳೆ ಈರಮ್ಮ, ಶರಣ ಬಸವ, ಕೆ.ಜಿ ವೀರೇಶ್, ಎಸ್ಎಫ್ಐ ನ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ ಉಪಸ್ಥಿತರಿದ್ದರು.