ರಾಯಚೂರು : ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಪಿಂಚಣಿ ಸೌಲಭ್ಯ ಸೇರಿ ಇತರೆ ಬೇಡಿಕೆಗಳ ಬಗ್ಗೆ ಇದೇ ಅಧಿವೇಶನದಲ್ಲಿ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರ್ಷವರ್ಧನ್ ಹೇಳಿದರು.
ಸರ್ಕಾರಿ ಶಿಕ್ಷಕರಷ್ಟೇ ಕಾರ್ಯನಿರ್ವಹಿಸುವ ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಪಿಂಚಣಿ ಸೌಲಭ್ಯ ನೀಡಬೇಕು. 2006ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಹಾಗೂ ಮೊದಲೇ ನೇಮಕಗೊಂಡು ನಂತರ ಅನುಮಾನಕ್ಕೆ ಒಳಪಟ್ಟು ವೇತನ ಪಡೆಯುತ್ತ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಯಾವುದೇ ವಿಧದ ಪಿಂಚಣಿ ಸೌಲಭ್ಯವಿಲ್ಲ.
ಎನ್‌ಪಿಎಸ್ ಅಥವಾ ಓಪಿಎಸ್ ಸೌಲಭ್ಯ ಇಲ್ಲದೆ ಸುಮಾರು 2000ಕ್ಕೂ ಅಧಿಕ ನೌಕರರು ನಿವೃತ್ತಿ ಹೊಂದಿದ್ದಾರೆ. ಅನೇಕರು ಅಕಾಲಿಕ ಮರಣ ಹೊಂದಿದವರ ಕುಟುಂಬಗಳಿಗೆ ಆರ್ಥಿಕ ಸೌಲಭ್ಯ ದೊರೆತಿಲ್ಲ.
ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳು ನೀಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಆದರೂ ಸಹ ಸರ್ಕಾರ ಮಾತ್ರ ಬೇಡಿಕೆ ಈಡೇರಿಸುತ್ತಿಲ್ಲ.
ದೇಶದಲ್ಲಿ ಎಲ್ಲಿಯೂ ಇಲ್ಲದ ತಾರತಮ್ಯ ರಾಜ್ಯದಲ್ಲಿ ಮಾತ್ರ ಇರುವುದು ದುರಂತ. ರಾಜ್ಯ ಸರ್ಕಾರ ಇದೇ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.