ರಾಯಚೂರು: ಗ್ರಾಮೀಣ ಭಾಗದಲ್ಲಿ ಜನರ ಸಮಸ್ಯೆಗಳಿಗೆ ಅಧಿಕಾರಿಗಳು, ಜನನಾಯಕರು ಸರಿಯಾಗಿ ಸ್ಪಂದನೆ ಮಾಡದ ಹಿನ್ನೆಲೆ ಈ ಭಾರಿಯ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡುವದಾಗಿ ಜಿಲ್ಲಾಡಳಿತಕ್ಕೆ ಕರಡಿಗುಡ್ಡ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕರಡಿಗುಡ್ಡ ಗ್ರಾಮದಲ್ಲಿ 1ರಿಂದ 5ನೇ ತರಗತಿಯವರೆಗೆ ಶಾಲೆಯಿದೆ. ಆದರೆ ಶಾಲೆಯ ಕಟ್ಟಡವಿಲ್ಲದೆ ಮರದ ನೆರಳಲ್ಲಿ ಕುಳಿತು ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಸಮಸ್ಯೆಗೆ ಸ್ಪಂದಿಸಿಲ್ಲ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸುಮಾರು 250ಕ್ಕೂ ಹೆಚ್ಚು ಮತದಾರರಿರುವ ಕರಡಿಗುಡ್ಡ ಗ್ರಾಮದ ಜನ ಲೋಕಸಭೆ ಚುನಾವಣೆಯಿಂದ ದೂರು ಉಳಿಯುವುದಕ್ಕೆ ನಿರ್ಧರಿಸಿದ್ದಾರಂತೆ.
ಸರಕಾರಕ್ಕೆ ಸೇರಿರುವ 10 ಎಕರೆ ಜಮೀನುಯಿದ್ದು, ಅದರಲ್ಲಿ ಶಾಲೆಗೆ ಅವಶ್ಯಕತೆ ಇರುವ ಜಮೀನುನ್ನು ನೀಡಿ, ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ನಿರ್ಲಕ್ಷಿಸಿದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ.