ಲಿಂಗಸುಗೂರು: ಇಲ್ಲಿನ ಪುರಸಭೆ ವ್ಯಾಪ್ತಿಗೆ ಒಳಪಡುವ ವಾರ್ಡ್ಗಳಿಗೆ ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರು ಪೂರೈಸಲು ಪುರಸಭೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ನಾರಾಯಣಪುರ ಬಲದಂಡೆ ಮುಖ್ಯನಾಲೆಯಿಂದ ಬೇಸಿಗೆಯಲ್ಲಿ ನೀರು ತುಂಬಿಸಿಕೊಳ್ಳಲು ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳು, ಇದೀಗ ಕೆರೆ ದುರಸ್ತಿ ನೆಪ ಮುಂದಿಟ್ಟು ವಾರಕ್ಕೊಮ್ಮೆ ನೀರು ಬಿಡಲು ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರು ನೀರಿಗಾಗಿ ಒತ್ತಡ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಸಕ ಡಿ.ಎಸ್. ಹೂಲಗೇರಿ ನೀರು ಸಂಗ್ರಹಣಾ ಕೆರೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿ ಪರಿಶೀಲಿಸಿದರು. ರಾಂಪೂರ ಏತ ನೀರಾವರಿ ನಾಲೆಯಿಂದ ಕೆರೆಗೆ ನೀರು ತುಂಬಿಸಲು ಸುದೀರ್ಘ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಪುರಸಭೆ ವ್ಯಾಪ್ತಿ ವಾರ್ಡಗಳಿಗೆ ಸದ್ಯ ಆರು ದಿನಕ್ಕೊಮ್ಮೆ ನೀರು ಬಿಡುವುದು ಅನಿವಾರ್ಯ. ಏತ ನೀರಾವರಿ ಕಾಲುವೆ ಮೂಲಕ ನೀರು ಬಂದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತೆ. ಈ ಕುರಿತು ಅಧಿಕಾರಿಗಳು ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜನತೆ ಭಯಪಡುವ ಅಗತ್ಯವಿಲ್ಲ. ಅನಿವಾರ್ಯವಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.