ರಾಯಚೂರು: ನಗರ ಪ್ರದೇಶದಲ್ಲಿ ಭಾರಿ ಮಳೆ ಸುರಿದರೆ ಮೂರ್ನಾಲ್ಕು ಬಡಾವಣೆಗಳು ನೀರಿನಿಂದ ಜಲಾವೃತವಾಗುತ್ತವೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಯೋಜನೆ ರೂಪಿಸದ ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ರಾಜಕಾಲುವೆಗಳಲ್ಲಿ ಹೂಳೆತ್ತದಿರುವುದೇ ಅದಕ್ಕೆ ಕಾರಣ. ಹಾಗೆಯೇ ನಗರಸಭೆ ನಿರ್ಲಕ್ಷ್ಯವೂ ಎದ್ದು ಕಾಣುತ್ತದೆ.
ವರುಣ ಆರ್ಭಟ ಹೆಚ್ಚಾದರೆ ಸಿಯಾತಲಾಬ್, ಜಲಾಲ್ನಗರ, ನೀರುಬಾವಿ ಕುಂಟಾ ಬಡಾವಣೆಗಳ ನಿವಾಸಿಗಳು ರಾತ್ರಿ ಜಾಗರಣೆ ಮಾಡುವ ದುಸ್ಥಿತಿ ಬರುತ್ತದೆ. ಮನೆಗೆ ನೀರು ನುಗ್ಗಿದ್ದರೆ ಆಹಾರ ಪದಾರ್ಥಗಳು, ಧಾನ್ಯಗಳು ನೀರು ಪಾಲಾಗುತ್ತವೆ. ಒಂದು ದಿನ ಮಳೆ ಸುರಿದರೆ ಈ ದುಸ್ಥಿತಿ ಎದುರಾಗುತ್ತದೆ. ಇನ್ನು ಬಿಟ್ಟೂ ಬಿಡದೆ ಸುರಿದರೆ ಜನರ ಪರಿಸ್ಥಿತಿ ದೇವರಿಗೆ ಪ್ರೀತಿ. ರಸ್ತೆಗಳ ಮೇಲೆಲ್ಲಾ ನೀರು ಹರಿದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.
ಮಳೆ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಅಗತ್ಯ. ಆದರೆ, ಆದ್ಯಾವ ಕೆಲಸವನ್ನೂ ನಗರಸಭೆ ಮಾಡಿಲ್ಲ. ರಾಜಕಾಲುವೆಗಳ ನಿರ್ವಹಣೆ ಕೂಡ ಅಷ್ಟಕಷ್ಟೆ. ಜೊತೆಗೆ ರಾಜಕಾಲುವೆಗಳು ಒತ್ತುವರಿಯಾಗಿರುವ ಆರೋಪಗಳಿವೆ. ಈ ಎಲ್ಲಾ ಕಾರಣಗಳಿಂದ ಮಳೆ ಪ್ರವಾಹವೇ ಬಂದಂತೆ ಭಾಸವಾಗುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಚರಂಡಿಯಲ್ಲೇ ನಿಲ್ಲುತ್ತದೆ. ಆಗ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಹೀಗಾಗಿ, ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿಗೆ ಎದುರಾಗಿದೆ. ಮನೆಗಳಿಗೆ ಮಳೆ ನೀರು ನುಗ್ಗದಂತೆ ಶಾಶ್ವತ ಪರಿಹಾರ ಕೈಗೊಳ್ಳಿ ಎಂದು ಹಲವು ಸಲ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.