ರಾಯಚೂರು: ರಾಯಚೂರು ಪ್ರವೇಶಿಸಿರುವ ಭಾರತ್ ಜೋಡೋ ಯಾತ್ರೆ ಇಂದು ಯರಗೇರಾ ಗ್ರಾಮದಿಂದ ಆರಂಭಗೊಂಡಿದ್ದು, ಯಾತ್ರೆ ವೇಳೆ ಡಿಕೆಶಿ ಬ್ಯಾಂಡ್ ಬಾರಿಸುವ ಮೂಲಕ ಗಮನ ಸೆಳೆದರು.
ರಾಹುಲ್ ಗಾಂಧಿ ನೇತೃತ್ವದ ಜೋಡೋ ಯಾತ್ರೆ ಇಂದು ಯರಗೇರಾ ಗ್ರಾಮದಿಂದ ಬೆಳಗ್ಗೆ ಆರಂಭಗೊಂಡಿದ್ದು, ಯಾತ್ರೆಯಲ್ಲಿ ಹಲವಾರು ಜನ ಭಾಗಿಯಾಗಿದ್ದಾರೆ. ಇನ್ನೂ ಯಾತ್ರೆ ವೇಳೆ ಮೇಳಾ ತಾಳಗಳೊಂದಿಗೆ ಜನರು ರಾಗಾರೊಂದಿಗೆ ನೃತ್ಯ ಮಾಡುತ್ತ ಹೆಜ್ಜೆ ಹಾಕುತ್ತಿದ್ದು, ಈ ವೇಳೆ ಡಿಕೆಶಿ ಡ್ರಮ್ ಬ್ಯಾಂಡ್ನ್ನು ಕೊರಳಲ್ಲಿ ಧರಿಸಿ ತಾವೇ ಬ್ಯಾಂಡ್ ಬಾರಿಸುವ ಮೂಲಕ ಯಾತ್ರೆಯಲ್ಲಿ ಗಮನ ಸೆಳೆದರು.
ಇನ್ನೂ ನಿನ್ನೆ ಜಿಲ್ಲೆಗೆ ಪ್ರವೇಶವಾಗಿರುವ ಭಾರತ್ ಜೋಡೋ ಯಾತ್ರೆ ಸಂಜೆ ವೇಳೆಗೆ ಯರಗೇರಾ ಗ್ರಾಮಕ್ಕೆ ತಲುಪಿದ್ದು, ಬಳಿಕ ಅಲ್ಲಿನ ಮುಖಂಡರೊಂದಿಗೆ ರಾಗಾ ಸಭೆ ನಡೆಸಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಈಗಾಗಲೇ ರಾಯಚೂರು ನಗರ ಸಮೀಪಸುತ್ತಿದ್ದು, ಕೆಲ ಹೊತ್ತಿನಲ್ಲಿ ನಗರದ ಹೊರವಲಯದ ಬೃಂದಾವನ ಹೋಟೆಲ್ಗೆ ತಲುಪಲಿದೆ. ಕೆಲ ಕಾಲ ಅಲ್ಲಿಯೇ ರಾಹುಲ್ ಗಾಂಧಿ ವಿಶ್ರಾಂತಿ ಪಡೆದ ನಂತರ ನಗರಕ್ಕೆ ಪ್ರವೇಶ ಮಾಡಲಿದ್ದಾರೆ. ಇನ್ನು ಇಂದು ಸಂಜೆ ವಾಲ್ಕಟ್ ಮೈದಾನದಲ್ಲಿ ರಾಗಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಸಾರ್ವಜನಿಕರನ್ನು ಉದ್ದೇಶಿ ರಾಗಾ ಮಾತನಾಡಲಿದ್ದಾರೆ.
ಸಭೆಯ ಬಳಿಕ ಯಾತ್ರೆ ನಗರದ ಹೊರವಲಯದ ಆನಂದ ಹೈಸ್ಕೂಲ್ ಹತ್ತಿರ ತಲುಪಲಿದ್ದು ಕೈ ನಾಯಕರು ಇಂದು ಅಲ್ಲೇ ವಾಸ್ತವ್ಯ ಮಾಡಲಿದ್ದಾರೆ. ರಾಹುಲ್‌ಗಾಂಧಿ ಜತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಮುಖಂಡರಾದ ಕೆ.ಸಿ.ವೇಣುಗೋಪಾಲ್, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್, ಎನ್.ಎಸ್.ಬೋಸರಾಜ್, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಸೇರಿದಂತೆ ಅನೇಕ ಮುಂಖಡರು ಭಾಗಿಯಾಗಿದ್ದಾರೆ.
ಇದನ್ನೂ ಓದಿ: ರಾಹುಲ್ಗೆ ಹೊಸ ಇಮೇಜ್ ನೀಡಿದ ಪಾದಯಾತ್ರೆ: ಸಿದ್ದರಾಮಯ್ಯ - ಡಿಕೆಶಿ ಬಾಂಧವ್ಯಕ್ಕೂ ಮುನ್ನುಡಿ