ರಾಯಚೂರು: ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ನಗರದ ರಿಮ್ಸ್ ಹಾಗೂ ನವೋದಯ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಮೊದಲಿಗೆ ರಿಮ್ಸ್ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾಧಿಕಾರಿ, ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಿದರು. ಹೊಸದಾಗಿ ನಿರ್ಮಿಸಲಾಗುತ್ತಿರುವ 20 ಹಾಸಿಗೆಯ ಕೊಠಡಿ ಪರಿಶೀಲಿಸಿ, ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದ ಆಮ್ಲಜನಕ ಘಟಕ ಸ್ಥಳ ಪರಿಶೀಲಿಸಿದರು. ಬಳಿಕ ಆಸ್ಪತ್ರೆಗೆ ಆಗಮಿಸುವ ಕೋವಿಡ್ ರಹಿತ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ರೋಗಿಗಳಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗದ ಹಾಗೆ ಅಗತ್ಯ ಕ್ರಮ ಕೈಗೊಳ್ಳಲು ವೈದ್ಯರಿಗೆ ಸೂಚಿಸಿದರು.
ನಂತರ ನವೋದಯ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಕೋವಿಡ್ ರೋಗಿಗಳಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು. ಈ ಆಸ್ಪತೆಯಲ್ಲಿ 150 ಹಾಸಿಗೆಗಳು ಕೋವಿಡ್ ರೋಗಿಗಳಿಗೆ ಮೀಸಲಿದ್ದು, ತೀವ್ರ ಉಸಿರಾಟದ ತೊಂದರೆ ಅನುಭವಿಸುವವರಿಗೆ ಮಾತ್ರ ಆಮ್ಲಜನಕದ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.