ಲಿಂಗಸುಗೂರು(ರಾಯಚೂರು): ಕಲ್ಯಾಣ ಕರ್ನಾಟಕದ ದೇವಸ್ಥಾನಗಳಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ರಾಯಚೂರು ಜಿಲ್ಲೆ ಲಿಂಗಸುಗೂರಿನ ನಿಷೇಧಿತ ಗುರುಗುಂಟಾ ಅಮರೇಶ್ವರ ಕಾರ್ತಿಕೋತ್ಸವ ಆಚರಣೆಯಲ್ಲಿ ಭಕ್ತರು ಭಾಗವಹಿಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯ ಈ ದೇವಸ್ಥಾನದ ಬಳಿ ಕೋವಿಡ್ ಸೋಂಕು ಹರಡುವಿಕೆ ನಿಮಿತ್ತ ಕಾರ್ತಿಕದ ಆಚರಣೆಗಳನ್ನು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಹಾಕಿದೆ. ಆದರೆ, ದೇವಸ್ಥಾನ ಸಮಿತಿ ಕೋವಿಡ್ ಸಂಬಂಧ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವದು ಕಂಡು ಬಂದಿತು. ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರುತ್ತಿರುವ ಸುದ್ದಿ ಹರಡುತ್ತಿದ್ದಂತೆ ಸಂಜೆ ವೇಳೆಗೆ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಪ್ರಣತಿಗೆ ಎಣ್ಣೆ, ಬತ್ತಿ ಹಾಕಿ ದೀಪ ಬೆಳಗಿ ಸಂಭ್ರಮಿಸಿದರು.
ಪೊಲೀಸರು ಅಥವಾ ತಾಲ್ಲೂಕು ಆಡಳಿತದ ಯಾವೊಬ್ಬ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದಿರುವುದು ಅಚ್ಚರಿ ಮೂಡಸಿತ್ತಲ್ಲದೆ, ಹಲವು ಅನುಮಾನುಗಳಿಗೆ ಎಡೆ ಮಾಡಿಕೊಟ್ಟಿದೆ. ಸಾವಿರಾರು ಭಕ್ತರು ಭಾಗವಹಿಸಿದ್ದ ಜನಸ್ತೋಮದಲ್ಲಿ ಸಾಮಾಜಿಕ ಅಂತರ, ಮಾಸ್ಕ ಧರಿಸುವುದು, ಸ್ಯಾನಿಟೈಸರ್ ನಾಪತ್ತೆಯಾಗಿತ್ತು. ಕಾರ್ತಿಕೋತ್ಸವ ನಿಷೇಧದ ಬ್ಯಾನರ್ ಹಾಕಿರುವ ಆಡಳಿತ ಮಂಡಳಿ, ಕನಿಷ್ಠ ಬರುವ ಭಕ್ತರ ಆರೋಗ್ಯ ರಕ್ಷಣೆಗೆ ಗಮನ ಹರಿಸದೆ ನಿರ್ಲಕ್ಷ್ಯವಹಿಸಿರುವುದು ಎದ್ದು ಕಾಣುತ್ತಿತ್ತು. ಭಕ್ತರು ಜಯಘೋಷಗಳನ್ನು ಕೂಗಿ ಕೊರೊನಾ ಭಯವಿಲ್ಲದೆ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.